ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಇನ್ನಿಲ್ಲ

Update: 2019-03-22 12:40 GMT

ಹುಬ್ಬಳ್ಳಿ, ಮಾ. 22: ಪೌರಾಡಳಿತ ಸಚಿವ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ (ಸಿ.ಎಸ್.ಶಿವಳ್ಳಿ) (58) ಅವರು ತೀವ್ರ ಹೃದಯಾಘಾತದಿಂದ ಶುಕ್ರವಾರ ಮಧ್ಯಾಹ್ನ 1:30ರ ಸುಮಾರಿಗೆ ನಿಧನರಾಗಿದ್ದಾರೆ.

ಶುಕ್ರವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ವೇಳೆ ಹಠಾತ್ತನೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿನ ಲೈಫ್‌ಲೈನ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಶಿವಳ್ಳಿ ಅವರು ಅಸುನೀಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಿವಳ್ಳಿ ಅವರು ಈ ಹಿಂದೆ ಎರಡು ಬಾರಿ ಲಘು ಹೃದಯಾಘಾತಕ್ಕೊಳಗಾಗಿದ್ದು, ಬೈಪಾಸ್ ಸರ್ಜರಿಯನ್ನು ಮಾಡಿಸಿಕೊಂಡಿದ್ದರು. ಈ ಸಂಬಂಧ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಗೊತ್ತಾಗಿದೆ.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಿವಳ್ಳಿ ಅವರು ಗುರುವಾರ ಮಧ್ಯರಾತ್ರಿಯವರೆಗೂ ಧಾರವಾಡದ ಕಟ್ಟಡ ದುರಂತ ಸ್ಥಳದಲ್ಲಿ ಖುದ್ದು ಹಾಜರಿದ್ದು, ಪರಿಹಾರ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇದರಿಂದ ತೀವ್ರ ಬಳಲಿದ್ದ ಶಿವಳ್ಳಿ, ಅನಂತರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದರು. ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಪದೇಪದೇ ಕೆಮ್ಮು ಬರುತ್ತಿದ್ದು ಹೃದಯಾಘಾತವಾಗಿದೆ ಎಂದು ಶಿವಳ್ಳಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಅತ್ಯಂತ ಜನಪ್ರಿಯ ಶಾಸಕರಾಗಿದ್ದ ಶಿವಳ್ಳಿ ಧಾರವಾಡ ಜಿಲ್ಲೆ ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 58 ವರ್ಷದ ಶಿವಳ್ಳಿ ಬಿ.ಎ. ಪದವೀಧರರಾಗಿದ್ದರು. 1994ರಲ್ಲಿ ಕೆಸಿಪಿಯಿಂದ ಸ್ಪರ್ಧಿಸುವುದರ ಮೂಲಕ ರಾಜಕೀಯ ಪ್ರವೇಶಿಸಿದ್ದ ಶಿವಳ್ಳಿ ಮೊದಲ ಚುನಾವಣೆಯಲ್ಲಿ ಸೋಲು ಕಂಡಿದ್ದರು.

1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 2008ರಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. 2013, 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಮೈತ್ರಿ ಸರಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದರು.

ಯರಗುಪ್ಪಿಯಲ್ಲಿ ಅಂತ್ಯ ಸಂಸ್ಕಾರ: ಶಿವಳ್ಳಿ ಅವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿಯ ಮದೀನಾ ಕಾಲನಿಯಲ್ಲಿರುವ ಅವರ ನಿವಾಸದಲ್ಲಿ ಸಂಜೆ 6ಗಂಟೆಯ ವರೆಗೂ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ. ಆ ಬಳಿಕ ಅವರ ಸ್ವಕ್ಷೇತ್ರ ಕುಂದಗೋಳಕ್ಕೆ ತೆಗೆದಕೊಂಡು ಹೋಗಿ ಸಂಜೆ 6.30ರಿಂದ ರಾತ್ರಿ 9ರ ವರಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.

ಅನಂತರ ಶಿವಳ್ಳಿಯವರ ಹುಟ್ಟೂರು ಯರಗುಪ್ಪಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು. ಶನಿವಾರ ಅಂತ್ಯ ಸಂಸ್ಕಾರ ನಡೆಸಲಾಗುವುದು. ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಗಣ್ಯರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News