ಅಡ್ವಾಣಿ ಯಶಸ್ಸಿಗೆ ಅಮಿತ್ ಶಾ ಕಾರಣ: ತನ್ನ ನಡೆಯನ್ನು ಸಮರ್ಥಿಸಿಕೊಂಡ ಬಿಜೆಪಿ ಹೇಳಿಕೆ

Update: 2019-03-23 07:43 GMT

ಹೊಸದಿಲ್ಲಿ, ಮಾ.23: ಹಿರಿಯ ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿಯವರ ಗಾಂಧಿನಗರ ಕ್ಷೇತ್ರದಿಂದ ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಕಣಕ್ಕಿಳಿಸಿರುವುದಕ್ಕೆ ಕಾಂಗ್ರೆಸ್ ಬಿಜೆಪಿಯನ್ನು ತೀವ್ರ ಟೀಕಿಸಿರುವಂತೆಯೇ ಬಿಜೆಪಿ ತನ್ನ ಕ್ರಮವನ್ನು ಸಮರ್ಥಿಸಲು ಪ್ರಯತ್ನಿಸುತ್ತಿದೆ. ಬಿಜೆಪಿ ಭದ್ರಕೋಟೆಯಾಗಿರುವ ಗಾಂಧಿನಗರದಿಂದ ಅಡ್ವಾಣಿ  ಸ್ಪರ್ಧಿಸಿದ ಪ್ರತಿ ಚುನಾವಣೆಯಲ್ಲೂ ಅವರ ಯಶಸ್ಸಿನ ಹಿಂದೆ ಅಮಿತ್ ಶಾ ಇದ್ದರೆಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿಕೊಂಡಿದ್ದಾರೆ.

“ಪ್ರತಿ ಚುನಾವಣೆಯಲ್ಲಿ ಅಡ್ವಾಣಿ ಯಶಸ್ಸಿನ ಹಿಂದಿನ ವ್ಯಕ್ತಿ ಅಮಿತ್ ಶಾ ಆಗಿದ್ದರು. ಅವರು ಆ ಕ್ಷೇತ್ರದ ಉಸ್ತುವಾರಿಯಾಗಿದ್ದರು'' ಎಂದು ಜಾವ್ಡೇಕರ್ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವರಾಗಿ ಹಾಗೂ ಉಪ ಪ್ರಧಾನಿಯಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದ ಅಡ್ವಾಣಿ ಗಾಂಧಿನಗರ ಕ್ಷೇತ್ರದಿಂದ 1998ರಿಂದ  ಸತತ ಆರು ಬಾರಿ ಆಯ್ಕೆಯಾಗಿದ್ದರು. “ಚುನಾವಣಾ ಪ್ರಚಾರ ಸಮಯದುದ್ದಕ್ಕೂ  ಅಡ್ವಾಣಿ ಎಲ್ಲೆಡೆ ಪ್ರಯಾಣಿಸುತ್ತಿದ್ದರೂ ಪ್ರತಿ ಬಾರಿ ಅವರು ಅಮೋಘ ವಿಜಯ ಸಾಧಿಸುವಂತೆ ನೋಡಿಕೊಂಡಿದ್ದವರು ಅಮಿತ್ ಶಾ'' ಎಂದು ಜಾವ್ಡೇಕರ್ ಹೇಳಿದ್ದಾರೆ.

“ರಾಜ್ಯ ಬಿಜೆಪಿ ನಾಯಕರೂ, ಗಾಂಧಿನಗರದಿಂದ ಅಮಿತ್ ಶಾ  ಸ್ಪರ್ಧಿಸಬೇಕೆಂದು ಬಯಸಿದ್ದರು. ಬಿಜೆಪಿ ಮಾರ್ಚ್ 16ರಂದು ಗಾಂಧಿನಗರದ ಕಾರ್ಯಕರ್ತರ ಹಾಗೂ ನಾಯಕರ ಅಭಿಪ್ರಾಯ ಸಂಗ್ರಹಕ್ಕೆ ವೀಕ್ಷಕರನ್ನು ಕಳುಹಿಸಿತ್ತು ಹಾಗೂ ಹೆಚ್ಚಿನವರು  ಶಾ ಅವರು ಸ್ಪರ್ಧಿಸಬೇಕೆಂದು ಹೇಳಿದ್ದರು'' ಎಂದು ಬಿಜೆಪಿ ನಾಯಕ ನಿಮಬಾಬೆನ್ ಆಚಾರ್ಯ ಹೇಳಿದ್ದಾರೆ.

ಬಿಜೆಪಿ ಬಿಡುಗಡೆಗೊಳಿಸಿದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಅಡ್ವಾಣಿ ಹೆಸರಿಲ್ಲದೇ ಇರುವುದನ್ನು ಕಂಡು ಕಾಂಗ್ರೆಸ್ ಟೀಕಿಸಿತ್ತಲ್ಲದೆ ಪಕ್ಷ ನಾಯಕ ಪಿ ಎಲ್ ಪುನಿಯಾ ಪ್ರತಿಕ್ರಿಯಿಸಿ ``ಅಡ್ವಾಣಿ ಅವರಂತಹ ಖ್ಯಾತ ಸಂಸದೀಯ ಪಟು ಬದಲಿಗೆ ಅಮಿತ್ ಶಾಗೆ ಅವಕಾಶ ನೀಡಲಾಗಿದೆ. ಬಿಜೆಪಿಯನ್ನು ಕೇವಲ ಅಮಿತ್ ಶಾ ನಡೆಸುತ್ತಿದ್ದಾರೆಂದು ಈಗ ಜನರಿಗೆ ಸ್ಪಷ್ಟವಾಗಿದೆ'' ಎಂದು  ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News