ಪರೀಕ್ಷೆಗೆ ತೆರಳುತ್ತಿದ್ದ ದಲಿತ ವಿದ್ಯಾರ್ಥಿಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ದುಷ್ಕರ್ಮಿಗಳು

Update: 2019-03-23 09:35 GMT

ಹೊಸದಿಲ್ಲಿ, ಮಾ.12: ಗುಜರಾತ್ ರಾಜ್ಯದ ಪಟಾನ್ ಜಿಲ್ಲೆಯ ಗೋರಡ್ ಎಂಬ ಗ್ರಾಮದಲ್ಲಿ ಬೋರ್ಡ್ ಪರೀಕ್ಷೆ ಬರೆಯಲು ತೆರಳುತ್ತಿದ್ದ 17 ವರ್ಷದ ದಲಿತ ವಿದ್ಯಾರ್ಥಿಯೊಬ್ಬನ್ನು ಇಬ್ಬರು ವ್ಯಕ್ತಿಗಳು ಮರಕ್ಕೆ ಕಟ್ಟಿ ಹಾಕಿ ತೀವ್ರವಾಗಿ ಥಳಿಸಿದ ಅಮಾನವೀಯ ಘಟನೆ ಮಾ.18ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬುಧವಾರ ವಿದ್ಯಾರ್ಥಿಯ ಮೈಯಲ್ಲಿರುವ ಗಾಯಗಳನ್ನು ನೋಡಿ ಆತನ ತಾಯಿ ವಿಚಾರಿಸಿದಾಗ ಆತ ನಡೆದ ಘಟನೆಯನ್ನು ವಿವರಿಸಿದ್ದಾನೆ.

ಮೆಹ್ಸಾನ ಮೂಲದ ಮಿತ್ ಕುಮಾರ್ ನರೇಶ್ ಭಾಯಿ ಚಾವ್ಡಾ ಎಂಬ ಈ ವಿದ್ಯಾರ್ಥಿ ತನ್ನ ಮನೆಯಿಂದ ಆ ದಿನ ಇಂಗ್ಲಿಷ್ ವಿಷಯದ ಪರೀಕ್ಷೆ ಬರೆಯಲು ಧಿನೋಜ್ ಗ್ರಾಮದ ಸಾರ್ವಜನಿಕ್ ವಿದ್ಯಾ ಮಂದಿರ್ ಹೈಸ್ಕೂಲ್ ಗೆ ರಾಜ್ಯ ಸಾರಿಗೆ ಬಸ್ ಮೂಲಕ ಸುಮಾರು 1 ಗಂಟೆಗೆ ಬಂದಿದ್ದ. ಈ ವೇಳೆ ಬಸ್ ಕಂಡಕ್ಟರ್, ಪರಿಚಯದ ರಮೇಶ್ ಪಟೇಲ್ ಎಂಬಾತ ಸ್ವಲ್ಪ ಕೆಲಸವಿದೆ ಎಂದು ಮಿತ್ ಕುಮಾರ್ ನನ್ನು ಹೊರಗಡೆ ತನ್ನ ಮೋಟಾರ್ ಸೈಕಲ್ ನಲ್ಲಿ ಕಾಯುತ್ತಿದ್ದ ಇನ್ನೊಬ್ಬ ವ್ಯಕ್ತಿಯ ಬಳಿ ಕರೆದೊಯ್ದಿದ್ದ. ಇಬ್ಬರೂ ಆತನನ್ನು ಗೋರಡ್ ಗ್ರಾಮಕ್ಕೆ ಕರೆದೊಯ್ದು ಮರಕ್ಕೆ ಕಟ್ಟಿ ಹಾಕಿ ಬೆತ್ತದಿಂದ ಥಳಿಸಿ, ನಿಂದಿಸಿ ಶಿಕ್ಷಣ ಪಡೆಯುವ ಬದಲು ಕೂಲಿ ಕೆಲಸ ಮಾಡಬೇಕೆಂದು ಒತ್ತಾಯಿಸಿದ್ದರು ಎಂದು ಪೊಲಿಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ನಂತರ ಬಾಲಕ ಪರೀಕ್ಷೆಗೆ ಹಾಜರಾಗದೆ ಮನೆಗೆ ವಾಪಸಾಗಿದ್ದ.

ಮೇಲ್ಜಾತಿಯ ಯುವತಿ ಜತೆ ತನ್ನ ಪುತ್ರನಿಗೆ ಸ್ನೇಹವಿತ್ತು ಎಂಬ ಕಾರಣಕ್ಕೆ ಆತನನ್ನು ಥಳಿಸಲಾಗಿದೆ ಎಂಬ ಸುದ್ದಿಯನ್ನು ವಿದ್ಯಾರ್ಥಿಯ ತಾಯಿ ನಿರಾಕರಿಸಿದ್ದಾರೆ.

ಈ ಪ್ರಕರಣದ ಕುರಿತಂತೆ ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲ. ಶಾಸಕ ಜಿಗ್ನೇಶ್ ಮೇವಾನಿ ಆಸ್ಪತ್ರೆಗೆ ತೆರಳಿ ಸಂತ್ರಸ್ತನ ಆರೋಗ್ಯ ವಿಚಾರಿಸಿದ್ದಾರಲ್ಲದೆ ‘‘ದಲಿತ ಯುವಕನ ನೆತ್ತರಿನಿಂದ ಹೋಳಿ ಆಚರಿಸಲಾಗಿದೆ’’ ಎಂದು ಘಟನೆಯನ್ನು ಬಣ್ಣಿಸಿದ್ದಾರೆ.

‘‘ವಿದ್ಯಾರ್ಥಿಗೆ 11ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯ ಜತೆ ಸ್ನೇಹವಿತ್ತೆಂಬ ಶಂಕೆಯಿಂದ ಆತನಿಗೆ ಆಕೆಯ ಸಂಬಂಧಿಕರಿಬ್ಬರು ಥಳಿಸಿದ್ದಾರೆ. ಪರೀಕ್ಷೆ ಬರೆದರೆ ಕೊಲ್ಲುವುದಾಗಿಯೂ ಆತನನ್ನು ಬೆದರಿಸಲಾಗಿದೆ’’ ಎಂದು ಮೇವಾನಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News