ಭಟ್ಕಳ ಮೂಲದ ಪ್ರಮುಖ ಐಸಿಸ್ ಉಗ್ರ ಶಫಿ ಅರ್ಮಾರ್ ಸಾವು

Update: 2019-03-23 15:23 GMT

ಹೊಸದಿಲ್ಲಿ, ಮಾ.23: ಸಿರಿಯಾದಲ್ಲಿ ಮಾರ್ಚ್ 19ರಂದು ನಡೆದ ಘರ್ಷಣೆಯಲ್ಲಿ ಸಂಘಟನೆಯ ಸದಸ್ಯ, ಭಟ್ಕಳ ಮೂಲದ ಶಫಿ ಅರ್ಮಾರ್ ಸಾವನ್ನಪ್ಪಿದ್ದಾನೆ ಎಂದು ಐಸಿಸ್ ಸಂಘಟನೆಯ ಪ್ರಕಟಣೆ ತಿಳಿಸಿದೆ.

ಶಫಿ ಇಸ್ಲಾಮಿಕ್ ಸ್ಟೇಟ್(ಐಸಿಸ್)ಗೆ ಭಾರತದಿಂದ ಸದಸ್ಯರನ್ನು ಸೇರ್ಪಡೆಗೊಳಿಸುವ ಹೊಣೆ ನಿರ್ವಹಿಸುತ್ತಿದ್ದ ಎಂದು ಭಾರತ ಹಾಗೂ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ‘ಅನ್ಸಾರುಲ್ ತೌಹೀದ್’ನ ಸ್ಥಾಪಕ ಸದಸ್ಯರಲ್ಲಿ ಒಬ್ಬನಾಗಿರುವ ಶಫಿ ಸಿರಿಯಾದಲ್ಲಿ ಐಸಿಸ್ ವಶದಲ್ಲಿರುವ ಅಂತಿಮ ಪ್ರದೇಶ ಬಾಗೌಝ್‌ನಲ್ಲಿ ಮಾರ್ಚ್ 19ರಂದು ಮಿತ್ರರಾಷ್ಟ್ರಗಳ ಪಡೆಗಳೆದುರು ನಡೆದ ಹೋರಾಟದಲ್ಲಿ ಸಾವನ್ನಪ್ಪಿರುವುದಾಗಿ ಐಸಿಸ್ ಹೇಳಿಕೆ ತಿಳಿಸಿದೆ.

 ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್ ಬಗ್ದಾದಿಗೆ ನಿಷ್ಠೆ ಪ್ರಕಟಿಸಿದ್ದ ಈತನ ಸಹೋದರ ಸುಲ್ತಾನ್ ಅರ್ಮಾರ್ (‘ಅನ್ಸಾರುಲ್ ತೌಹೀದ್’ನ ಸ್ಥಾಪಕ) ಸಿರಿಯಾದಲ್ಲಿ ಕೆಲ ವರ್ಷದ ಹಿಂದೆ ನಡೆದ ಘರ್ಷಣೆಯಲ್ಲಿ ಮೃತಪಟ್ಟಿದ್ದ. ಭಾರತದಿಂದ ಅಪಘಾನಿಸ್ತಾನಕ್ಕೆ, ಅಲ್ಲಿಂದ ಸಿರಿಯಾಕ್ಕೆ ಆಗಮಿಸಿದ್ದ ಸಹೋದರರು ಬಳಿಕ ಐಸಿಸ್ ಸೇರ್ಪಡೆಗೊಂಡಿದ್ದರು ಎಂದು ಸಂಘಟನೆ ತಿಳಿಸಿದೆ. ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ ಈತನನ್ನು ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿ ಸೇರಿಸಿತ್ತು. 2017ರ ಜೂನ್‌ನಲ್ಲಿ ಅಮೆರಿಕ ಶಫಿಯನ್ನು ‘ಜಾಗತಿಕ ಉಗ್ರ’ನೆಂದು ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News