ಕಮಲನಾಥ್ ಸವಾಲು ಸ್ವೀಕರಿಸಿದ ದಿಗ್ವಿಜಯ್: ಭೋಪಾಲ್‌ನಿಂದ ಕಣಕ್ಕೆ

Update: 2019-03-23 15:14 GMT

ಹೊಸದಿಲ್ಲಿ, ಮಾ.23: ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಕಠಿಣ ಕ್ಷೇತ್ರದಲ್ಲಿ ಕಣಕ್ಕಿಳಿಯುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಒಡ್ಡಿದ್ದ ಸವಾಲನ್ನು ಸ್ವೀಕರಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಭೋಪಾಲ್‌ನಿಂದ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ಭೋಪಾಲ್ ಕ್ಷೇತ್ರದಲ್ಲಿ ಬಿಜೆಪಿಯ ಅಲೋಕ್ ಸಂಜಾರ್ ಹಾಲಿ ಸಂಸದರಾಗಿದ್ದಾರೆ. ಭೋಪಾಲ್, ಇಂದೋರ್ ಹಾಗೂ ವಿದಿಷಾದಲ್ಲಿ ಕಳೆದ ಮೂರು ದಶಕಗಳಲ್ಲಿ ಒಮ್ಮೆಯೂ ಕಾಂಗ್ರೆಸ್ ಗೆದ್ದಿಲ್ಲ. ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಕಮಲನಾಥ್ ಹಾಗೂ ದಿಗ್ವಿಜಯ್ ಸಿಂಗ್ ಮಧ್ಯೆ ಸ್ವಪ್ರತಿಷ್ಠೆಯ ತಿಕ್ಕಾಟ ನಡೆಯುತ್ತಿದ್ದು, ಕಮಲನಾಥ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಇದು ತಾರಕಕ್ಕೇರಿದೆ. ಈ ಮುಸುಕಿನ ಗುದ್ದಾಟ ಪಕ್ಷದ ಸಾಧನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಬಗ್ಗೆ ಕಾಂಗ್ರೆಸ್ ವರಿಷ್ಟರು ಆತಂಕಿತರಾಗಿದ್ದಾರೆ. ಕಳೆದ ಶನಿವಾರ ಹೇಳಿಕೆ ನೀಡಿದ್ದ ಕಮಲನಾಥ್, ದಿಗ್ವಿಜಯ್ ಸಿಂಗ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದರೆ ಅತ್ಯಂತ ಕಠಿಣವಾದ, ಅಂದರೆ ಕಳೆದ 30-35 ವರ್ಷದಿಂದ ಕಾಂಗ್ರೆಸ್‌ಗೆ ಗೆಲ್ಲಲು ಅಸಾಧ್ಯವಾಗಿರುವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಹೇಳಿದ್ದರು.

ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದ ದಿಗ್ವಿಜಯ್, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತನ್ನಲ್ಲಿ ಸಾಮರ್ಥ್ಯವಿದೆ ಎಂದು ಗುರುತಿಸಿದ ಕಮಲನಾಥ್‌ಗೆ ಅಭಿನಂದನೆಗಳನ್ನು ಹೇಳಬಯಸುತ್ತೇನೆ ಎಂದಿದ್ದರು. ತಾನು ಈ ಹಿಂದೆ 1984 ಮತ್ತು 1991ರಲ್ಲಿ ಸ್ಪರ್ಧಿಸಿ ಗೆದ್ದಿದ್ದ ರಾಜಗಢ ಕ್ಷೇತ್ರದಲ್ಲಿ ಈ ಬಾರಿ ಕಣಕ್ಕಿಳಿಯಲು ದಿಗ್ವಿಜಯ್ ಬಯಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಮಧ್ಯಪ್ರದೇಶದಲ್ಲಿ 29 ಸಂಸದ್ ಕ್ಷೇತ್ರಗಳಿದ್ದು ಎಪ್ರಿಲ್ 29, ಮೇ 6, 12 ಮತ್ತು 19- ಈ ನಾಲ್ಕು ಹಂತದಲ್ಲಿ ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News