ಆಕೆ ಮಾತನಾಡುವುದಿಲ್ಲ, ಸಲಹೆಯನ್ನೂ ಸ್ವೀಕರಿಸಲ್ಲ: ಮಮತಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Update: 2019-03-23 15:33 GMT

ಕೋಲ್ಕತಾ, ಮಾ.23: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ತನ್ನ ಮರ್ಜಿಯಂತೆ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಮಮತಾ ಸರಕಾರ ಏಕವ್ಯಕ್ತಿಯ ಪ್ರದರ್ಶನವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಪ.ಬಂಗಾಳದ ಆಡಳಿತ ಒಬ್ಬರ ಕೈಯಲ್ಲಿದೆ. ಅವರು ಯಾರೊಂದಿಗೂ ಮಾತಾಡುವುದಿಲ್ಲ ಅಥವಾ ಯಾವುದೇ ಸಲಹೆಯನ್ನೂ ಸ್ವೀಕರಿಸುವುದಿಲ್ಲ. ತನ್ನ ಮನಸ್ಸಿಗೆ ತೋಚಿದಂತೆ ನಡೆಯುತ್ತಿದ್ದಾರೆ ಎಂದು ಮಾಲ್ದಾ ಜಿಲ್ಲೆಯ ಚಾಂಚಲ್ ಎಂಬಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಟೀಕಿಸಿದರು. “ಕೃಷಿಕರಿಗೆ, ಯುವಜನತೆಗೆ ನೆರವಾಗುವಂತಹ ಯಾವುದೇ ಯೋಜನೆ ಇಲ್ಲಿಲ್ಲ. ಬಂಗಾಳದ ಜನತೆಗೆ ಧ್ವನಿ ಇಲ್ಲವೇ. ಇಡೀ ರಾಜ್ಯವನ್ನು ಒಬ್ಬ ವ್ಯಕ್ತಿ ತನ್ನ ಇಷ್ಟದಂತೆ ನಿಯಂತ್ರಿಸಲು ಅವಕಾಶ ಕೊಡಬೇಕೇ” ಎಂದವರು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಿನಾ ಹಲ್ಲೆ ನಡೆಯುತ್ತಿದೆ. ಆದರೂ ಸಹಿಸಿಕೊಂಡು ಕಾಂಗ್ರೆಸ್ ಸಿದ್ಧಾಂತವನ್ನು ಉಳಿಸಿಕೊಂಡು ಬಂದಿರುವ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಹೆದರಬೇಡಿ, ನಾನು ನಿಮ್ಮೊಂದಿಗಿದ್ದೇನೆ. ಕೇಂದ್ರದಲ್ಲಿ ನಾವು ಸರಕಾರ ರಚಿಸುತ್ತೇವೆ. ಆ ಬಳಿಕ ಏನಾಗುತ್ತದೆ ಎಂದು ನೋಡಿ ಎಂದವರು ಕಾರ್ಯಕರ್ತರನ್ನು ಹುರಿದುಂಬಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News