ಉಗ್ರರು ಒತ್ತೆಯಾಳಾಗಿ ಇರಿಸಿದ್ದ ಬಾಲಕ ಸಾವು: ಕಾಶ್ಮೀರದಲ್ಲಿ ಮಡುಗಟ್ಟಿದ ಆಕ್ರೋಶ

Update: 2019-03-23 16:13 GMT

ಹಜಿನ್,ಮಾ.23: ಜಮ್ಮು ಮತ್ತು ಕಾಶ್ಮೀರದ ಹಜಿನ್ ಪಟ್ಟಣದ ಮನೆಯೊಂದರಲ್ಲಿ 12ರ ಹರೆಯದ ಬಾಲಕನನ್ನು ಉಗ್ರರು ಒತ್ತೆಯಾಳಾಗಿ ಬಳಸಿ ಆತನ ಸಾವಿಗೆ ಕಾರಣವಾಗಿರುವ ಘಟನೆಯ ನಂತರ ಕಣಿವೆ ರಾಜ್ಯದ ನಿವಾಸಿಗಳಲ್ಲಿ ಉಗ್ರರ ವಿರುದ್ಧ ಆಕ್ರೋಶ ಹೊಗೆಯಾಡುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 6ನೇ ತರಗತಿ ಕಲಿಯುತ್ತಿದ್ದ ಆತಿಫ್ ಶಾಫಿಯ ತಂದೆ ಮುಹಮ್ಮದ್ ಶಾಫಿ ಮಿರ್ ಮತ್ತು ಚಿಕ್ಕಪ್ಪ ಅಬ್ದುಲ್ ಹಮೀದ್ ಮಿರ್ ಕುಟುಂಬ ಹಜಿನ್ ಪಟ್ಟಣದ ಮೂರಂತಸ್ತಿನ ಮನೆಯಲ್ಲಿ ಜೊತೆಯಾಗಿ ನೆಲೆಸಿದ್ದಾರೆ. ಎಂಟು ಸದಸ್ಯರಿರುವ ಈ ಮನೆಯಲ್ಲಿ ಲಷ್ಕರೆ ತಯ್ಯಬದ ಕಮಾಂಡರ್ ಅಲಿ ಮತ್ತು ಆತನ ಸಹಚರ ಹುಬೈಬ್ ಕೂಡಾ ತಲೆಮರೆಸಿಕೊಂಡಿದ್ದ ಎಂದು ವರದಿ ತಿಳಿಸಿದೆ.

 ಮಾರ್ಚ್ 21ರಂದು ಸೇನೆ ಈ ಮನೆಯನ್ನು ರಹಸ್ಯವಾಗಿ ಸುತ್ತುವರಿದಿತ್ತು. ಸೇನೆ ಮನೆಯ ಸಮೀಪ ಆಗಮಿಸುತ್ತಿದ್ದಂತೆ ಉಗ್ರರು ಸೇನೆಯ ವಿರುದ್ಧ ಗುಂಡಿನ ದಾಳಿ ನಡೆಸಿದ್ದರು. ಸೇನೆ ಮತ್ತು ಉಗ್ರರ ಮಧ್ಯೆ ಗುಂಡಿನ ದಾಳಿ ನಡೆಯುತ್ತಿರುವಂತೆಯೇ ಮನೆಯ ಆರು ಸದಸ್ಯರು ಮನೆಯಿಂದ ಹೊರಗೆ ಓಡಿ ಬಂದು ತಪ್ಪಿಸಿಕೊಂಡಿದ್ದಾರೆ. ಆದರೆ ಆತಿಫ್ ಮತ್ತಾತನ ಚಿಕ್ಕಪ್ಪ ಅಬ್ದುಲ್ ಹಮೀದ್‌ರನ್ನು ಉಗ್ರರು ಒತ್ತೆಯಾಳುಗಳನ್ನಾಗಿ ಮನೆಯೊಳಗೆ ಇರಿಸಿದ್ದಾರೆ. ಆದರೆ ಸಂಜೆಯ ವೇಳೆಗೆ ಅಬ್ದುಲ್ ಹಮೀದ್ ಉಗ್ರರ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಸಫಲವಾಗಿದ್ದಾರೆ.

ಅಂತಿಮವಾಗಿ ಬಾಲಕ ಮಾತ್ರ ಉಗ್ರರ ಒತ್ತೆಯಾಳಾಗಿ ಉಳಿದಿದ್ದಾನೆ. ತನ್ನ ಮಗನನ್ನು ಬಿಡುವಂತೆ ಆತಿಫ್ ತಾಯಿ ಎಷ್ಟು ಅಂಗಲಾಚಿದರೂ ಉಗ್ರರು ಆಕೆಯ ಮಾತಿಗೆ ಕಿವಿಗೊಡಲಿಲ್ಲ. ಅಂತಿಮವಾಗಿ ಉಗ್ರರು ಮತ್ತು ಸೇನೆ ಮಧ್ಯೆ ನಡೆದ ಹನ್ನೆರಡು ಗಂಟೆಗಳ ಸುದೀರ್ಘ ಗುಂಡಿನ ಚಕಮಕಿ ನಂತರ ಆತಿಫ್‌ನ ಸುಟ್ಟು ಕರಕಲಾದ ಮೃತದೇಹ ಗುಂಡಿನದಾಳಿಯಿಂದ ಧರಾಶಾಹಿಯಾದ ಮನೆಯಿಂದ ಹೊರತೆಗೆಯಲಾಗಿತ್ತು.

ಘಟನೆಯಲ್ಲಿ ಇಬ್ಬರು ಉಗ್ರರನ್ನು ಸೇನೆ ಹತ್ಯೆ ಮಾಡಿತ್ತು. ಈ ಉಗ್ರರು ಮೂರು ದಿನಗಳಿಂದ ತಮ್ಮ ಮನೆಯಲ್ಲಿ ಅಡಗಿಕೊಂಡಿದ್ದರು ಎಂದು ಆತಿಫ್ ಸಂಬಂಧಿಯೊಬ್ಬರು ಆಂಗ್ಲ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News