ಚುನಾವಣೆ ಸಂಪನ್ಮೂಲ ಸಂಗ್ರಹಕ್ಕೆ ಓಲಾ ಟ್ಯಾಕ್ಸಿ ನಿಷೇಧ: ಕೇಂದ್ರ ಸಚಿವ ಡಿವಿಎಸ್ ಆರೋಪ

Update: 2019-03-23 16:59 GMT

ಬೆಂಗಳೂರು, ಮಾ.23: ಚುನಾವಣೆಗಾಗಿ ಸಂಪನ್ಮೂಲ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಆಗದೆ ಇರುವುದರಿಂದ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಓಲಾ ಟ್ಯಾಕ್ಸಿಗಳ ಸೇವೆಯನ್ನು ಆರು ತಿಂಗಳು ಕಾಲ ನಿಷೇಧಿಸಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಗಂಭೀರ ಆರೋಪ ಮಾಡಿದರು.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಓಲಾ ಟ್ಯಾಕಿಗಳ ಸೇವೆಯನ್ನು ನಿಷೇಧಿಸಿರುವ ಸರಕಾರದ ಕ್ರಮದ ಹಿಂದೆ ಚುನಾವಣಾ ಖರ್ಚಿಗಾಗಿ ಸಂಪನ್ಮೂಲ ಸಂಗ್ರಹದ ಉದ್ದೇಶವಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ದೂರಿದರು. ಇದರ ಪರಿಣಾಮವಾಗಿ ಓಲಾ ಟ್ಯಾಕ್ಸಿಗಳ ಸುಮಾರು 40 ಸಾವಿರ ಚಾಲಕರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಬಹುತೇಕ ಮಂದಿ ಟ್ಯಾಕ್ಸಿಗಳನ್ನು ಲೋನ್ ಮೂಲಕ ಖರೀದಿಸಿದ್ದಾರೆ. ಈ ಟ್ಯಾಕ್ಸಿಗಳು ಕಾರ್ಯನಿರ್ವಹಿಸದೆ ಇದ್ದರೆ, ಅವುಗಳ ಮಾಸಿಕ ಕಂತನ್ನು ಪಾವತಿಸುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದರು.

ಸರಕಾರದ ಈ ನಿರ್ಧಾರದಿಂದ ಸುಮಾರು ಎರಡು ಲಕ್ಷ ಮಂದಿಯ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಲ್ಲದೇ, ಈ ಟ್ಯಾಕ್ಸಿ ಸೇವೆಯನ್ನು ನಂಬಿಕೊಂಡಿರುವ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರ ಈ ಕೂಡಲೇ ಓಲಾ ಟ್ಯಾಕ್ಸಿ ಸೇವೆಯ ವಿರುದ್ಧ ಹೇರಿರುವ ನಿಷೇಧದ ಆದೇಶವನ್ನು ಹಿಂಪಡೆಯಬೇಕು. ನಿಯಮಾವಳಿಗಳ ಉಲ್ಲಂಘನೆಯಾಗಿದ್ದರೆ, ಸರಕಾರ ಸಂಬಂಧಪಟ್ಟ ಕಂಪೆನಿಯ ಆಡಳಿತ ವರ್ಗದ ಮೇಲೆ ಕ್ರಮ ಕೈಗೊಳ್ಳಲಿ. ಟ್ಯಾಕ್ಸಿ ಸೇವೆಯನ್ನು ನಿಷೇಧಿಸುವುದು ಸಮಸ್ಯೆಗೆ ಪರಿಹಾರವಾಗುವುದಿಲ್ಲ ಎಂದು ಅವರು ತಿಳಿಸಿದರು.

ಲೋಕಸಭಾ ಚುನಾವಣೆಯು ರಾಷ್ಟ್ರೀಯ ವಿಷಯಗಳ ಆಧಾರದಲ್ಲಿ ನಡೆಯುತ್ತದೆ. ಮತದಾರರ ಮುಂದಿರುವ ಆಯ್ಕೆ ಅತ್ಯಂತ ಸ್ಪಷ್ಟವಾಗಿದೆ. ಒಂದೆಡೆ ಪ್ರಧಾನಿ ನರೇಂದ್ರಮೋದಿಯ ಸಮರ್ಥ ನಾಯಕತ್ವವಿದೆ. ಮತ್ತೊಂದೆಡೆ ನಾಯಕತ್ವವೇ ಇಲ್ಲದಂತಹ ಘಟಬಂಧನವಿದೆ. ದೇಶದ ಜನ ನಿಸ್ಸಂಶಯವಾಗಿ ಮೋದಿ ನಾಯಕತ್ವದ ಎನ್‌ಡಿಎ ಸರಕಾರವನ್ನು ಮತ್ತೊಮ್ಮೆ ಚುನಾಯಿಸುತ್ತಾರೆ ಎಂದು ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ದೋಸ್ತಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಆಂತರಿಕ ಕಚ್ಚಾಟದಿಂದಾಗಿ ಬಿಜೆಪಿ ಪಕ್ಷವು ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೇಂದ್ರದ ಬಿಜೆಪಿ ನಾಯಕರಿಗೆ ಕಪ್ಪ ನೀಡಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್ ಬಿಡುಗಡೆ ಮಾಡಿರುವ ಡೈರಿ ಶುದ್ಧ ಸುಳ್ಳು. ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತವಿದ್ದ ವೇಳೆ ಕಾಂಗ್ರೆಸ್ ಈ ಬಗ್ಗೆ ಯಾಕೆ ತನಿಖೆ ನಡೆಸಲಿಲ್ಲ ಎಂದು ಅವರು ಪ್ರಶ್ನಿಸಿದರು.

ಮಾಜಿ ಪ್ರಧಾನಿ ಪಲಾಯನ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಜೀವನದಲ್ಲಿ ಒಮ್ಮೆಯಾದರೂ ಅವರ ವಿರುದ್ಧ ಸ್ಪರ್ಧಿಸಬೇಕು ಎಂಬ ಮನಸ್ಸಿತ್ತು. ಆದರೆ, ಅವರು ಚುನಾವಣೆಗೆ ಮುನ್ನವೇ ಕ್ಷೇತ್ರದಿಂದ ಪಲಾಯನ ಮಾಡಿದ್ದಾರೆ ಎಂದು ಸದಾನಂದಗೌಡ ವ್ಯಂಗ್ಯವಾಡಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರು ಸೇರಿದಂತೆ ಯಾರೇ ನನ್ನ ವಿರುದ್ಧ ಸ್ಪರ್ಧಿಸಿದರು ಗೆಲ್ಲುವುದು ನಾನೇ. ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಪರವಾದ ಉತ್ತಮ ಕೆಲಸಗಳನ್ನು ಆಧರಿಸಿ, ಮೋದಿ ಅಲೆ ಮತ್ತು ನನ್ನ ಬಗ್ಗೆ ಇರುವ ಉತ್ತಮ ಅಭಿಪ್ರಾಯದಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಅಶ್ವಥ್‌ ನಾರಾಯಣ, ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ, ಸಹ ವಕ್ತಾರ ಎ.ಎಚ್.ಆನಂದ್, ಮಾಜಿ ಉಪ ಮೇಯರ್ ಎಸ್.ಹರೀಶ್ ಹಾಗೂ ಮುಖಂಡ ತಮ್ಮೇಶ್ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News