ಬೆಂಗಳೂರಿನಿಂದಲೇ ಸ್ಪರ್ಧೆ: ವಾಟಾಳ್ ನಾಗರಾಜ್

Update: 2019-03-23 17:25 GMT

ಬೆಂಗಳೂರು, ಮಾ.23: ಈ ಬಾರಿಯ ಲೋಕಸಭಾ ಚುನಾವಣೆಗೆ ಬೆಂಗಳೂರಿನಿಂದಲೇ ಸ್ಪರ್ಧಿಸುವುದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಶನಿವಾರ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಲೋಕಸಭಾ ಚುನಾವಣಾ ಹಿನ್ನೆಲೆ ಕುರಿಗಳ ಸಮ್ಮೇಳನ ಆಯೋಜಿಸಿ ಮಾತನಾಡಿದ ಅವರು, ಸದ್ಯಕ್ಕೆ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ನಾನು ಚುನಾವಣೆಗೆ ನಿಲ್ಲುತ್ತಿರುವ ಮುಖ್ಯ ಉದ್ದೇಶ ಮುಗ್ಧ ಜನರನ್ನು ಬಲಿಪಶುಗಳಂತೆ ನೋಡುತ್ತಿರುವ ರಾಜಕೀಯ ಪಕ್ಷಗಳಿಂದ ಮುಗ್ಧ ಜನರನ್ನು ಬಚಾವ್ ಮಾಡಲು. ಹೀಗಾಗಿ, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ಪವಿತ್ರವಾಗಿರಬೇಕು. ಒಳ್ಳೆಯ ಮನಸ್ಸಿನ ಪ್ರಾಮಾಣಿಕರು ಚುನಾವಣೆಗೆ ನಿಲ್ಲಬೇಕು. ಚುನಾವಣೆಯಲ್ಲಿ ಜಾತಿ, ಹಣ ಹಾಗೂ ಭ್ರಷ್ಟಾಚಾರ ಇರಬಾರದು. ಅಲ್ಲದೆ, ಮುಗ್ಧ ಮನಸ್ಸಿನ ಮುಗ್ಧ ಪ್ರಾಣಿಗಳು ಕುರಿಗಳು, ಇಂತಹ ಮುಗ್ಧ ಮನಸ್ಸಿನ ಪ್ರಾಮಾಣಿಕರು ಚುನಾವಣೆಗೆ ನಿಲ್ಲಬೇಕು. ಯಾರು ಲೋಕಸಭೆಗೆ, ವಿಧಾನಸಭೆಗೆ ಬರಬಾರದೋ ಅಂತವರೆಲ್ಲರೂ ಬರುತ್ತಿದ್ದಾರೆ. ಚುನಾವಣೆ ವ್ಯವಸ್ಥೆ ತೀರಾ ಹದಗೆಟ್ಟ ಹೋಗಿದ್ದು, ಪ್ರಜಾಪ್ರಭುತ್ವಕ್ಕೆ ಅಪಾಯ ಒದಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News