ಸಾರ್ವಜನಿಕವಾಗಿ ಅಳುವವರನ್ನು ನಂಬಬೇಡಿ ಎಂದು ಲೋಹಿಯಾ ಹೇಳಿದ್ದರು: ಪ್ರೊ.ರವಿವರ್ಮಕುಮಾರ್

Update: 2019-03-23 17:44 GMT

ಬೆಂಗಳೂರು, ಮಾ.23: ಸಾರ್ವಜನಿಕವಾಗಿ ಅಳುವವರನ್ನು ನಂಬಬಾರದು ಎಂಬುದು ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಅವರ ಸಂದೇಶವಾಗಿತ್ತು ಎಂದು ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಹೇಳಿದ್ದಾರೆ.

ಶನಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಭಾರತ ಯಾತ್ರಾ ಕೇಂದ್ರ, ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್, ಡಾ.ರಾಮಮನೋಹರ ಲೋಹಿಯಾ ಸಮತಾ ವಿಚಾರ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತೀಚಿಗೆ ಕಾರ್ಯಕ್ರಮದಲ್ಲಿ ಜೆಡಿಎಸ್‌ನ ರಾಷ್ಟ್ರೀಯ ವರಿಷ್ಠ ದೇವೇಗೌಡ ಅತ್ತರೆ ಅವರ ಮಗ, ಹೆಂಡತಿ, ಮೊಮ್ಮಗ ಸಾಲಾಗಿ ಅತ್ತಿದ್ದರು. ಆದರೆ, ಲೋಹಿಯಾ ಸಾರ್ವಜನಿಕವಾಗಿ ಅಳುವವರನ್ನು ಎಂದಿಗೂ ನಂಬಬೇಡಿ ಎಂದು ಹೇಳಿದ್ದರು. ತಮಗೆ ಅನಿಸಿದ್ದನ್ನು ಸಾರ್ವಜನಿಕವಾಗಿ ಹೇಳುತ್ತಿದ್ದರು ಎಂದು ಅವರು ತಿಳಿಸಿದರು.

ಲೋಹಿಯಾ ಅವರು ರಾಜಕೀಯವಾಗಿ ಎಂದೆಂದಿಗೂ ಪಾಲಿಸಬೇಕಾದ ಭಾರತೀಯ ಸಮಾಜವಾದಿ ಸಿದ್ಧಾಂತವನ್ನು ಬಿಟ್ಟು ಹೋಗಿದ್ದಾರೆ. ಗಾಂಧಿಯವರ ಅಹಿಂಸಾ ಮಾರ್ಗ ಮತ್ತು ಹೋರಾಟ, ಅಂಬೇಡ್ಕರ್ ಅವರ ಸಾಮಾಜಿಕ ಕೆಲಸ ಹಾಗೂ ಜಾತಿ ವಿನಾಶಗಳನ್ನು ಬೆಸೆದವರು ಲೋಹಿಯಾ ಎಂದು ಅವರು ನುಡಿದರು.

ಸಮಾನತೆ ಸಮಾಜ ಕಟ್ಟಲು ಮೂಲಭೂತವಾಗಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು. ಶಿಕ್ಷಣದಲ್ಲಿ ಸಮಾನತೆಯಿಲ್ಲದಿದ್ದರೆ ಹುಟ್ಟಿನಿಂದಲೇ ಮಕ್ಕಳು ಅಸಮಾನತೆ ಬೆಳೆಸಿಕೊಳ್ಳುತ್ತಾರೆ. ಮಾತೃಭಾಷೆ ಶಿಕ್ಷಣದಿಂದ ಸಮಾನತೆ ಸಾಧ್ಯ ಎಂದು ಲೋಹಿಯಾ ಹಲವು ಬಾರಿ ಪ್ರತಿಪಾದಿಸಿದ್ದರು ಎಂದು ಅವರು ಅಭಿಪ್ರಾಯಪಟ್ಟರು.

ರಾಜಕೀಯ ಕ್ಷೇತ್ರದಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ಲೋಹಿಯಾ ಪ್ರಭಾವವಿದೆ. ಕನ್ನಡದ ಸಾಹಿತ್ಯ ಲೋಕದಲ್ಲಿ ಪ್ರಭಾವ ಬೀರಿದಷ್ಟು ಬೇರೆ ಎಲ್ಲಿಯೂ ಅವರು ಪ್ರಭಾವ ಬೀರಿಲ್ಲ. ಗೋಕಾಕ್ ಚಳವಳಿಯ ಅನೇಕ ನೇತಾರರು ಲೋಹಿಯಾರಿಂದ ಪ್ರೇರಣೆ ಪಡೆದವರಾಗಿದ್ದಾರೆ ಎಂದು ಅವರು ತಿಳಿಸಿದರು.

ಅಂಕಣಕಾರ ನಟರಾಜ್ ಹುಳಿಯಾರ್ ಮಾತನಾಡಿ, ಸಾಮಾಜಿಕ, ರಾಜಕೀಯ, ಸಾಮಾಜಿಕ ಕೇಡುಗಳು ಎದ್ದು ಬರುತ್ತಿರುವ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವ ಅಥವಾ ಸಮಾಜದಲ್ಲಿ ಕೆಡಕು ಒಂದು ಬಾರಿ ಗೆದ್ದು ಬಿಟ್ಟರೆ ಅದು ಮುಂದೆ ತನ್ನನ್ನು ವರ್ಣನೆ ಮಾಡಿಕೊಳ್ಳುವ ಉದ್ದೇಶದಿಂದ ಅಲಂಕರಿಸಿಕೊಂಡು ನಿಂತು ಬಿಡುತ್ತದೆ. ಅದರ ಸೋಗು ಅನೇಕ ಸಲ ಅಲ್ಪಾವಧಿ, ಆತಂಕವಾದಿಯಾದರೂ ಅದು ಹೆಚ್ಚು ಕಡಿಮೆ ಎಲ್ಲ ಕಡೆಗೂ ಹಬ್ಬುತ್ತದೆ ಎಂದರು.

ಅನ್ಯಾಯ ಯಾವುದೇ ಮೂಲೆಯಿದ್ದರೂ ಹೋರಾಡಲು ಸಿದ್ದವಿರಬೇಕು. ಅದು ಬಿಟ್ಟು ಅನ್ಯಾಯ ಮಾಡಿದವರ ಪರ ವಾದ ಮಾಡುವುದು, ಮಾತನಾಡುವುದಲ್ಲ ಎಂಬುದನ್ನು ಲೋಹಿಯಾರಿಂದ ಕಲಿಯಬೇಕು ಎಂದ ಅವರು, ಕೇಡಿನ, ಕೆಡಕು ಮಾಡುವ ಧಾರ್ಮಿಕ ಹಾಗೂ ರಾಜಕೀಯ ವ್ಯಕ್ತಿಗಳನ್ನು ಎಂದಿಗೂ ವೈಭವೀಕರಿಸಬಾರದು ಎಂದು ಸಲಹೆ ನೀಡಿದ್ದಾರೆ ಎಂದು ನುಡಿದರು.

ದೇಶದಲ್ಲಿ ಪ್ರಜಾಪ್ರಭುತ್ವವನ್ನು ಮರಳಿ ತರಬೇಕೆಂದರೆ ಲೋಹಿಯಾ ವಾದವನ್ನು ಎಲ್ಲೆಡೆ ಪಸರಿಸಬೇಕು. 20 ನೆ ಶತಮಾನದಲ್ಲಿ ಅನೇಕ ವಿಮೋಚನಾ ಚಳವಳಿ ನಡೆದಿವೆ. ಹೀಗಾಗಿ, ಮತ್ತೊಮ್ಮೆ ನಾವು ಗಾಂಧೀ, ಅಂಬೇಡ್ಕರ್, ಲೋಹಿಯಾ ಚಿಂತನೆಗಳಿಗೆ ವಾಪಸ್ಸು ಹೋಗಬೇಕು ಎಂದು ನಟರಾಜ್ ಹುಳಿಯಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜವಾದಿ ಚಿಂತಕ ವಿಷ್ಣುನಾಯ್ಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಚಲನಚಿತ್ರ ನಿರ್ದೇಶಕ ಕೃಷ್ಣ ಮಾಸಡಿ, ಅನಿತಾ ವೆಂಕಟರಾಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News