ರಶ್ಯ ನಂಟು ಕುರಿತ ತನಿಖಾ ವರದಿ ಸಲ್ಲಿಸಿದ ಮಲ್ಲರ್

Update: 2019-03-23 17:54 GMT

ವಾಶಿಂಗ್ಟನ್, ಮಾ. 23: 2016ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಅವಧಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಚಾರ ತಂಡವು ರಶ್ಯದೊಂದಿಗೆ ನಂಟು ಹೊಂದಿತ್ತು ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದ ವಿಶೇಷ ವಕೀಲ ರಾಬರ್ಟ್ ಮಲ್ಲರ್ ತನ್ನ ತನಿಖೆಯನ್ನು ಮುಗಿಸಿದ್ದು, ಶುಕ್ರವಾರ ವರದಿಯನ್ನು ಸಲ್ಲಿಸಿದ್ದಾರೆ.

ಮಲ್ಲರ್ ತನ್ನ ವರದಿಯಲ್ಲಿ ಹೊಸದಾಗಿ ಯಾರ ವಿರುದ್ಧವೂ ದೋಷಾರೋಪಣೆಗೆ ಶಿಫಾರಸು ಮಾಡಿಲ್ಲ.

ವರದಿಯು ಗುಪ್ತವಾಗಿರುತ್ತದೆ. ಆದರೆ, ವರದಿಯ ಪ್ರಮುಖ ಅಂಶಗಳನ್ನು ಈ ವಾರಾಂತ್ಯದ ವೇಳೆಗೆ ನಿಮಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ಎಂಬುದಾಗಿ ವರದಿಯನ್ನು ಸ್ವೀಕರಿಸಿರುವ ಅಟಾರ್ನಿ ಜನರಲ್ ವಿಲಿಯಮ್ ಬರ್, ಸಂಸದರಿಗೆ ಬರೆದ ಪತ್ರವೊಂದರಲ್ಲಿ ಹೇಳಿದ್ದಾರೆ. ಬಳಿಕ, ಸಂಸದರಿಗೆ ನೀಡುವ ಮಾಹಿತಿಯನ್ನು ಬಹಿರಂಗಗೊಳಿಸಲಾಗುವುದು.

ರಶ್ಯ ಹಸ್ತಕ್ಷೇಪದಲ್ಲಿ ಟ್ರಂಪ್ ಪ್ರಚಾರ ತಂಡ ಅಥವಾ ಅದರ ಸದಸ್ಯರು ಶಾಮೀಲಾಗಿದ್ದಾರೆಯೇ ಎಂಬುದನ್ನು ಕಂಡುಹಿಡಿಯುವುದಕ್ಕಾಗಿ ಮಲ್ಲರ್ ತನಿಖೆಗೆ ಆದೇಶ ನೀಡಲಾಗಿತ್ತು. ವಾರಾಂತ್ಯದ ವೇಳೆಗೆ ಅಟಾರ್ನಿ ಜನರಲ್ ಸಂಸದರಿಗೆ ನೀಡುವ ಮಾಹಿತಿಯಲ್ಲಿ, ಈ ಪ್ರಶ್ನೆಗೆ ಉತ್ತರ ಲಭಿಸುವ ನಿರೀಕ್ಷೆಯಿದೆ.

ಚುನಾವಣೆಯಲ್ಲಿ ಟ್ರಂಪ್‌ಗೆ ಸಹಾಯ ಮಾಡುವುದಕ್ಕಾಗಿ ರಶ್ಯ ಹಸ್ತಕ್ಷೇಪ ನಡೆಸಿತ್ತು ಎಂಬ ನಿರ್ಧಾರಕ್ಕೆ ಅಮೆರಿಕ ಗುಪ್ತಚರ ಇಲಾಖೆ ಬಂದಿದೆ.

ಟ್ರಂಪ್‌ಗೆ ಸಂದ ಜಯ?

 ಮಲ್ಲರ್ ವರದಿಯಲ್ಲಿ ಹೊಸದಾಗಿ ಯಾರ ವಿರುದ್ಧವೂ ದೋಷಾರೋಪಣೆ ಇಲ್ಲದಿರುವುದರಿಂದ, ಇದು ಟ್ರಂಪ್‌ಗೆ ಸಂದ ವಿಜಯವಾಗಿದೆ ಎಂದು ಭಾವಿಸಲಾಗಿದೆ. ಹಾಲಿ ಅಧ್ಯಕ್ಷರನ್ನು ದೋಷಾರೋಪಣೆಗೆ ಗುರಿಪಡಿಸುವಂತಿಲ್ಲ ಎಂಬ ಕಾನೂನು ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ನು ಮಲ್ಲರ್ ಅನುಸರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News