ನಿಯಮ ಬಾಹಿರ ಲೈವ್‌ ಬ್ಯಾಂಡ್: 17 ಮಂದಿ ಬಂಧನ

Update: 2019-03-23 18:05 GMT

ಬೆಂಗಳೂರು, ಮಾ.23: ಕಾನೂನು ನಿಯಮ ಬಾಹಿರವಾಗಿ ಲೈವ್‌ಬ್ಯಾಂಡ್ ನಡೆಸುತ್ತಿದ್ದ ಆರೇಂಜ್ ಹೆಸರಿನ ಲೈವ್‌ಬ್ಯಾಂಡ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 17 ಜನರನ್ನು ಬಂಧಿಸಿದ್ದಾರೆ.

ಪ್ಯಾಲೇಸ್ ಗುಟ್ಟಹಳ್ಳಿಯ ನಾಯಕ ಸರ್ಕಲ್‌ನಲ್ಲಿರುವ ಶ್ರೀನಿವಾಸ ಬಾರ್ ರೆಸ್ಟೋರೆಂಟ್ (ಆರೇಂಜ್) ಹೆಸರಿನಲ್ಲಿ ಲೈವ್‌ಬ್ಯಾಂಡ್ ನಡೆಸುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತರು ಹೊರ ರಾಜ್ಯದಿಂದ ಮಹಿಳೆಯರನ್ನು ಬಾರ್ ಗರ್ಲ್‌ಗಳಾಗಿ ಕೆಲಸ ಮಾಡಲು ಕರೆ ತಂದು ಅವರ ಇಚ್ಛೆಗೆ ವಿರುದ್ಧವಾಗಿ ಹಾಗೂ ನಿಯಮ ಉಲ್ಲಂಘಿಸಿ, ಗ್ರಾಹಕರ ಮುಂದೆ ಅಶ್ಲೀಲವಾಗಿ ನೃತ್ಯ ಮಾಡಿಸುತ್ತಾ, ಹಣವನ್ನು ಎಸೆಯುವಂತೆ ಪ್ರಚೋದಿಸಿ, ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ನಾಲ್ಕು ಮಾಲಕರು: ಬಂಟ್ವಾಳ ತಾಲೂಕಿನ ಪಡ್ಡೂರು ಗ್ರಾಮದ ಸಂತೋಷ್(33), ಪಾಜಿಕಲ್ ನಿವಾಸಿಗಳಾದ ಉಮೇಶ್(33), ರಮೇಶ್(31) ಹಾಗೂ ಕೆಆರ್ ಪೇಟೆ ತಾಲೂಕಿನ ಸೀಳ್ನೆರೆ ನಿವಾಸಿ ಅಭಿಷೇಕ್(28) ಬಂಧಿತ ಲೈವ್‌ಬ್ಯಾಂಡ್ ಮಾಲಕರಾಗಿದ್ದು, ಇನ್ನುಳಿದ 13 ಜನ ಗ್ರಾಹಕರನ್ನು ಬಂಧಿಸಲಾಗಿದೆ.

ಲೈವ್‌ಬ್ಯಾಂಡ್‌ನಲ್ಲಿ ಇದ್ದ ಪಂಜಾಬ್, ದೆಹಲಿ ಮೂಲದ ಒಟ್ಟು 10 ಜನ ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ಬಂಧಿತರಿಂದ 19 ಮೊಬೈಲ್, 1.30 ಲಕ್ಷ ನಗದು, ಇತರೆ 2.5 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಇದೇ ಪ್ರಕರಣದಲ್ಲಿ ಆರೇಂಜ್ ಲೈವ್‌ಬ್ಯಾಂಡ್ ಮತ್ತೊಬ್ಬ ಮಾಲಕ ವೆಂಕಟೇಶ್ ತಲೆಮರೆಸಿಕೊಂಡಿದ್ದು, ಈತನ ಪತ್ತೆ ಕಾರ್ಯ ಮುಂದುವರೆದಿದೆ.

ಈ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News