ತಳ ಸಮುದಾಯಗಳು ಪರಂಪರೆಯ ಹಿರಿಮೆಯನ್ನು ಅರಿಯಲಿ: ಬಂಜಗೆರೆ ಜಯಪ್ರಕಾಶ್

Update: 2019-03-23 18:24 GMT

ಬೆಂಗಳೂರು, ಮಾ.23: ದೇಶದ ತಳ ಸಮುದಾಯಗಳು ತಮ್ಮ ಪರಂಪರೆಯ ಹಿರಿಮೆಯನ್ನು ಅರಿಯುವ ಮೂಲಕ ಕೀಳರಿಮೆಯಿಂದ ಹೊರ ಬರಬೇಕಿದೆ ಎಂದು ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ಶನಿವಾರ ಬಯಲು ಬಳಗ ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ‘ನಮ್ಮ ರಾಮ, ನಮ್ಮ ಕೃಷ್ಣ, ನಮ್ಮ ಶಿವ’ ಕುರಿತ ವಿಶೇಷ ಉಪನ್ಯಾಸ ನೀಡಿದ ಅವರು, ತಮ್ಮ ಸಾಮಾಜಿಕ ಪರಂಪರೆಯಲ್ಲಿ ಪ್ರತಿಯೊಂದು ಜಾತಿಗೂ ಸಾವಿರಾರು ವರ್ಷಗಳ ಇತಿಹಾಸವಿದೆ. ಸಾಂಸ್ಕೃತಿಕ ವೈವಿಧ್ಯತೆ ಇದೆ. ಇದರ ನಡುವೆ ಮತ್ತೊಮ್ಮೆ ಅನುಸಂಧಾನ ನಡೆಸುವ ಮೂಲಕ ತಳ ಸಮುದಾಯದ ಸಂಸ್ಕೃತಿಯನ್ನು ಮರು ರೂಪಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಿಸಿದರು.

ವೈದಿಕರು ಹೇರಲ್ಪಟ್ಟಿರುವ ಮೇಲು, ಕೀಳು, ತಾರತಮ್ಯ ಆಧಾರಿತ ಸಂಸ್ಕೃತಿಗೆ ಈ ದೇಶದ ಮೂಲನಿವಾಸಿಗಳಾದ ತಳ ಸಮುದಾಯಗಳು ನಮ್ಮದೇ ಆದಂತಹ ಬಹುತ್ವದ ಸಂಸ್ಕೃತಿಯನ್ನು ಮುನ್ನೆಲೆಗೆ ತರಬೇಕಿತ್ತು. ಆದರೆ, ಕಾರಣಾಂತರಗಳಿಂದ ಅವು ಮುನ್ನೆಲೆಗೆ ಬಂದಿಲ್ಲ. ಈಗಲಾದರು ನಮ್ಮ ಪರಂಪರೆಯ ಅವೈದಿಕ, ಬುಡಕಟ್ಟು, ಬಹುತ್ವ ಪರಂಪರೆಯನ್ನು ಜಾಗೃತಿಗೊಳಿಸುವ ಮೂಲಕ ಜನಪರವಾದ, ಪರಿಸರ ಪರವಾದ ಸಂಸ್ಕೃತಿಯಲ್ಲಿ ಬದುಕನ್ನು ಕಟ್ಟಿಕೊಳ್ಳುವ ಅಗತ್ಯತೆ ಇದೆ ಎಂದು ಅವರು ಹೇಳಿದರು.

ನಮ್ಮ ಭಾರತದ ಪರಂಪರೆಯು ಸಾವಿರಾರು ಬುಡಕಟ್ಟು, ಜಾತಿಗಳಿಂದ ರೂಪಿತಗೊಂಡಿದ್ದರು, ಎಲ್ಲರೂ ಸೌಹಾರ್ದತೆಯಿಂದ ತಮ್ಮದೆ ಆಚಾರ, ವಿಚಾರಗಳಿಂದ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ಇಂತಹ ವೈವಿಧ್ಯತೆ ಬೇರೆಲ್ಲೂ ಕಾಣಸಿಗುವುದಿಲ್ಲ. ಆದರೆ, ಆರ್ಯರ ಆಗಮನ ನಂತರ ಈ ಜಾತಿವಾರು ವೈವಿಧ್ಯತೆಯೆ ಮೇಲು-ಕೀಳಾಗಿ ರೂಪಿತಗೊಂಡಿತು. ಅಲ್ಲಿಂಂದ ನಮ್ಮ ಮೂಲ ಅಸ್ಮಿತೆಗಳು ಮರೆಯಾಗುತ್ತಾ ಸಾಗಿತು ಎಂದು ಅವರು ವಿಷಾದಿಸಿದರು.

ನಮ್ಮ ಅವೈದಿಕ ಪರಂಪರೆಯು ಮಿಳಿತಗೊಳ್ಳುವ ಗುಣವುಳ್ಳದ್ದಾಗಿದೆ. ಸಂಸ್ಕೃತಿ, ಮತ್ತೊಂದು ಸಂಸ್ಕೃತಿಯೊಂದಿಗೆ ಮಿಳಿತಗೊಳ್ಳುವುದು. ಸ್ವರೂಪದಲ್ಲಿ ವ್ಯತ್ಯಾಸವಾದರು ಸಹಜವೆಂಬಂತೆ ಭಾವಿಸಿ ಜೀವಿಸುವ ಪರಂಪರೆಯಾಗಿದೆ. ಗ್ರೀಕ್‌ನ ಅಲೆಕ್ಸಾಂಡರ್ ಹೆಸರು ಕೂಡ ನಮ್ಮ ಕಾರ್ತೀಕೇಯ, ಷಣ್ಮುಖ ಜೊತೆಯಾಗಿ ಸ್ಕಂದನಾಗಿ ಸೇರಿಸಲ್ಪಟ್ಟಿದೆ ಎಂದು ಅವರು ಅಭಿಪ್ರಾಯಿಸಿದರು.

ಈ ವೇಳೆ ನಾಟಕಕಾರ ಕೆ.ವೈ.ನಾರಾಯಣಸ್ವಾಮಿ, ಪತ್ರಕರ್ತರಾದ ಪಾರ್ವತೀಶ್, ಮಂಜುನಾಥ್ ಅದ್ದೆ, ಬಯಲು ಬಳಗದ ಹುಲಿಕುಂಟೆ ಮೂರ್ತಿ, ರವಿಬಾಗಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News