ತಾಕತ್ ಇದ್ದರೆ ನನ್ನ ವಿರುದ್ಧ ಸ್ಪರ್ಧಿಸಿ: ದೇವೇಗೌಡರಿಗೆ ಹುಣಸೂರು ಕೆ.ಚಂದ್ರಶೇಖರ್ ಸವಾಲು

Update: 2019-03-23 18:30 GMT

ಬೆಂಗಳೂರು, ಮಾ.23: ಮಾಜಿ ಪ್ರಧಾನ ಮಂತ್ರಿ ಎಚ್.ಡಿ ದೇವೇಗೌಡರಿಗೆ ತಾಕತ್ ಇದ್ದರೆ ನನ್ನ ಎದುರಾಳಿಯಾಗಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ, ನಿಮ್ಮ ಪ್ರಾಬಲ್ಯವಿರುವ ತುಮಕೂರು ಕ್ಷೇತ್ರದಲ್ಲಿ ಅಲ್ಲ ಎಂದು ಪ್ರಜಾಕ್ರಾಂತಿ ಪಕ್ಷದ ಸಂಸ್ಥಾಪಕ ಹುಣಸೂರು ಕೆ.ಚಂದ್ರಶೇಖರ್ ಸವಾಲು ಹಾಕಿದರು.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಜಾಕ್ರಾಂತಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಮ್ಮ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವುದು ನಿಜವಾದ ಗೆಲುವು ಅಲ್ಲ. ತಾಕತ್ ಇದ್ದರೆ ಬೆಂಗಳೂರು ಕೇಂದ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ನೋಡೋಣ ಎಂದು ಬಹಿರಂಗವಾಗಿ ಸವಾಲು ಹಾಕಿದರು.

ತುಮಕೂರಿಗೆ ಹೇಮಾವತಿ ನದಿಯಿಂದ ನೀರಿನ ಪೂರೈಕೆ ಮಾಡಲು ಸಾದ್ಯವಾಗಿಲ್ಲ ಅಂದ ಮೇಲೆ ಯಾವ ನೈತಿಕ ಆಧಾರದ ಮೇಲೆ ಮತಯಾಚನೆ ಮಾಡುತ್ತೀರಾ. ನಿಮ್ಮ ಪಕ್ಷದ ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡದೆ ನೀವು ಸ್ಪರ್ಧಿಸುತ್ತಿರುವುದು ಅವರಿಗೆ ನೀವು ಮಾಡಿದ ಮೋಸ ಅಲ್ಲವೆ. ನಿಮ್ಮವರನ್ನು ನೀವೇ ತುಳಿಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಇಂದು ರಾಜಕೀಯ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವಕ್ಕೆ ನೆಲೆ ಇಲ್ಲದಂತಾಗಿದೆ. ರಾಜ್ಯದ ದಕ್ಷಿಣ ಭಾಗವನ್ನೇ ದೇವೇಗೌಡರ ಕುಟುಂಬ ದತ್ತು ಪಡೆದುಕೊಂಡಿದೆ. ರಾಮನಗರದಲ್ಲಿ ಕುಮರಸ್ವಾಮಿ, ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ, ಮದ್ದೂರಿನಲ್ಲಿ ಬೀಗರು, ಮಂಡ್ಯದಲ್ಲಿ ನಿಖಿಲ್ ಕುಮರಸ್ವಾಮಿ ಹೀಗೆ ದಕ್ಷಿಣ ಭಾಗವನ್ನೆ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಯಕರ್ತರನ್ನು ಮತ್ತು ಹಿಂದುಳಿದವರನ್ನು ಕೇವಲ ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಹೊರತು ಅವರಿಗೆ ಯವುದೇ ಸ್ಥಾನ ಮಾನ ನೀಡದೆ ಕುಟುಂಬ ರಾಜಕೀಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News