ನಿಮ್ಮ ಕೊಡುಗೆ ಅಮೋಘ ಪರಿಣಾಮ ಬೀರಲಿದೆ: ಅಝೀಂ ಪ್ರೇಮ್ ಜಿಗೆ ಬಿಲ್ ಗೇಟ್ಸ್ ಶ್ಲಾಘನೆ

Update: 2019-03-25 08:30 GMT

ಹೊಸದಿಲ್ಲಿ, ಮಾ.25: ಭಾರತದ ಪ್ರಸಿದ್ಧ ಉದ್ಯಮಿ ಅಝೀಂ ಪ್ರೇಮ್ ಜಿ ಅವರು ನಡೆಸುತ್ತಿರುವ ಸಮಾಜ ಕಲ್ಯಾಣ ಚಟುವಟಿಕೆಗಳನ್ನು ಹಾಗೂ ವಿವಿಧ ಉದ್ದೇಶಗಳಿಗೆ ಅವರು ನೀಡುತ್ತಿರುವ ಹಣಕಾಸಿನ ನೆರವನ್ನು ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಕೊಡುಗೈ ದಾನಿಯೆಂದೇ ಖ್ಯಾತಿವೆತ್ತ ಬಿಲ್ ಗೇಟ್ಸ್  ಟ್ವಿಟರ್ ಮೂಲಕ ಪ್ರೇಮ್ ಜಿ ಅವರನ್ನು  ಹೊಗಳಿದ್ದಾರೆ. “ಸಮಾಜ ಕಲ್ಯಾಣ ಚಟುವಟಿಕೆಗಳಿಗೆ ಅವರು ತೋರಿರುವ ಸತತ ಬದ್ಧತೆ ನನಗೆ ಸ್ಫೂರ್ತಿ ನೀಡಿದೆ. ಅವರ ಇತ್ತೀಚಿಗಿನ ಕೊಡುಗೆ ಅಮೋಘ ಪರಿಣಾಮ ಬೀರಲಿದೆ'' ಎಂದು ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.

ಭಾರತದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿರುವ ಪ್ರೇಮ್ ಜಿ (73) ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಖಾಸಗಿ ಸಂಪತ್ತಿನ ಹೆಚ್ಚಿನ ಭಾಗವನ್ನು ಅಝೀಂ ಪ್ರೇಮ್ ಜಿ ಫೌಂಡೇಶನ್ ನ ದತ್ತಿ ನಿಧಿಗೆ ಸಮರ್ಪಿಸಿದ್ದರು. ಅವರ ಒಡೆತನದ ಹಲವು ಸಂಸ್ಥೆಗಳ ನಿಯಂತ್ರಣದಲ್ಲಿರುವ ವಿಪ್ರೋ ಕಂಪೆನಿಯ 52,750 ಕೋಟಿ ರೂ. ಮೌಲ್ಯದ ಶೇ 34ರಷ್ಟು ಶೇರುಗಳನ್ನು ಸಮಾಜಕ್ಕೆ ಉಪಯುಕ್ತ ಕಾರ್ಯಗಳಿಗೆ ಅವರಯ ಮುಡಿಪಾಗಿಸಿದ್ದಾರೆ. ತಾವು ಈ ಹಿಂದೆಯೇ ದಾನವಾಗಿ ನೀಡಿರುವ ವಿಪ್ರೋ ಶೇರುಗಳು ಹಾಗೂ ಇತರ ಸಂಪತ್ತಿನ ಹೊರತಾಗಿ ಅವರು ಈ ಕೊಡುಗೆ ನೀಡಿದ್ದಾರೆ. ಇದರೊಂದಿಗೆ ಅಝೀಂ ಪ್ರೇಮ್ ಜಿ ತಮ್ಮ ಫೌಂಡೇಶನ್ನಿಗೆ  ಒಟ್ಟು 1.45 ಲಕ್ಷ ಕೋಟಿ ರೂ. ದಾನ ಮಾಡಿದಂತಾಗಿದ್ದು, ವಿಪ್ರೋದ ಒಟ್ಟು ಶೇ 67ರಷ್ಟು ಶೇರುಗಳನ್ನೂ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಫೌಂಡೇಶನ್ ನ ಈ ಉದಾತ್ತ ಸೇವಾ ಕೈಂಕರ್ಯದಿಂದ ಕಳೆದ ಐದು ವರ್ಷಗಳಲ್ಲಿ ದೇಶಾದ್ಯಂತ 150ಕ್ಕೂ ಹೆಚ್ಚು ಸಂಸ್ಥೆಗಳು ಪ್ರಯೋಜನ ಪಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News