ಇರಾಕ್ ನ ಮಕ್ಕಳಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ: ಡಾ.ಝಕರಿಯಾ ಅಬ್ಬಾಸ್

Update: 2019-03-25 14:09 GMT

ಬೆಂಗಳೂರು, ಮಾ.25: ಇರಾಕ್‌ನಲ್ಲಿ ಜರುಗಿದ ಯುದ್ಧದ ಪರಿಣಾಮವಾಗಿ ಅಲ್ಲಿನ ಬಹುತೇಕ ಮಕ್ಕಳು ದೈಹಿಕವಾದ ನ್ಯೂನತೆಗಳೊಂದಿಗೆ ಹುಟ್ಟುತ್ತಿರುವುದು ಆತಂಕಕಾರಿ ಸಂಗತಿ. ಮಕ್ಕಳಲ್ಲಿ ಹೃದಯ, ಶ್ವಾಸಕೋಶಕ್ಕೆ ಸಂಬಂಧಿಸಿದ ಅನೇಕ ಬಗೆಯ ಸಮಸ್ಯೆಗಳನ್ನು ಕಾಣಬಹುದಾಗಿದೆ ಎಂದು ಗೀವ್ ಲೈಫ್ ಅಭಿಯಾನದ ಸಂಚಾಲಕ ಡಾ.ಝಕರಿಯಾ ಅಬ್ಬಾಸ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇರಾಕ್ ದೇಶದ ಕರ್ಬಲಾದಲ್ಲಿರುವ ಇಮಾಮ್ ಹುಸೇನ್ ಅವರ ಸ್ಮಾರಕದ ಆಡಳಿತ ಮಂಡಳಿಯು ಅರ್ಹ ಬಡವರನ್ನು ಗುರುತಿಸಿ ಭಾರತಕ್ಕೆ ಚಿಕಿತ್ಸೆಗಾಗಿ ಕಳುಹಿಸುತ್ತಾರೆ ಎಂದರು.

ಬೆಂಗಳೂರಿನ ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ ಅತ್ಯಂತ ಕಡಿಮೆ ಬೆಲೆಯಲ್ಲಿ ಇವರಿಗೆ ಚಿಕಿತ್ಸೆ ನೀಡುತ್ತಾರೆ. ‘ಹೂ ಇಸ್ ಹುಸೇನ್’ ಸಂಘಟನೆಯು ಶಸ್ತ್ರ ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತದೆ ಎಂದು ಝಕರಿಯಾ ಅಬ್ಬಾಸ್ ತಿಳಿಸಿದರು.

ಲಾರಿಯಾಟ್ ಎಜುಕೇಷನ್ ಅಂಡ್ ವೆಲ್ಫೇರ್ ಟ್ರಸ್ಟ್, ಚಿಕಿತ್ಸೆಗಾಗಿ ಆಗಮಿಸುವ ಇರಾಕ್ ದೇಶದ ನಿವಾಸಿಗಳಿಗೆ ಇಲ್ಲಿ ಉಳಿದುಕೊಳ್ಳಲು, ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಗೀವ್ ಲೈಫ್ ಅಭಿಯಾನವು ಲಂಡನ್‌ನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಆರಂಭಿಸಲಾಯಿತು. ಅದರಡಿಯಲ್ಲಿ ಸಂಘಟಿತರಾಗಿ ನಾವು ಬಡವರಿಗೆ ಸೇವೆ ಒದಗಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ ಇರಾಕ್ ದೇಶದ 17 ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದೀಗ, ಮುಜ್‌ತಬಾ ಹೈದರ್(4 ವರ್ಷ)ಗೆ ಕಳೆದ ವಾರ ನಾರಾಯಣ ಹೃದಯಾಲಯದಲ್ಲಿ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮತ್ತೊಂದು ಮಗು ಝೈದ್(12 ವರ್ಷ) ಇವರಿಗೆ ಆರು ತಿಂಗಳವರೆಗೆ ಔಷಧಿಯನ್ನು ನೀಡಲಾಗಿದ್ದು, ಬಳಿಕ ವೈದ್ಯರು ಪುನಃ ಪರಿಶೀಲನೆ ನಡೆಸಲಿದ್ದಾರೆ ಎಂದು ಝಕರಿಯಾ ಅಬ್ಬಾಸ್ ತಿಳಿಸಿದರು.

ಅಮೆರಿಕ, ಲಂಡನ್ ಸೇರಿದಂತೆ ಇನ್ನಿತರ ಪಾಶ್ಚಿಮಾತ್ಯ ದೇಶಗಳಲ್ಲಿ ಚಿಕಿತ್ಸೆಯು ತುಂಬಾ ದುಬಾರಿಯಾಗಿದ್ದು, ಬಡವರು ಅಷ್ಟೊಂದು ಪ್ರಮಾಣದ ಹಣವನ್ನು ವಿನಿಯೋಗಿಸಲು ಸಾಧ್ಯವಾಗುವುದಿಲ್ಲ. ಆದುದರಿಂದಲೇ, ಬಡವರಿಗಾಗಿ ನಾವು ಈ ಕೆಲಸವನ್ನು ಆರಂಭಿಸಿದ್ದೇವೆ ಎಂದು ಅವರು ಹೇಳಿದರು.

ಭವಿಷ್ಯದಲ್ಲಿ ಅಲ್ಲಿನ ಹಝ್ರತ್ ಝೈನುಲ್ ಆಬಿದೀನ್ ಆಸ್ಪತ್ರೆಯಲ್ಲೇ ವೈದ್ಯರನ್ನು ತರಬೇತುಗೊಳಿಸಿ, ಇಲ್ಲಿ ಸಿಗುವಂತಹ ಸೌಲಭ್ಯಗಳನ್ನು ಅಲ್ಲಿಯೇ ಸಿಗುವಂತೆ ಮಾಡುವ ಗುರಿಯಿದೆ ಎಂದು ಝಕರಿಯಾ ಅಬ್ಬಾಸ್ ಹೇಳಿದರು.

ಲಾರಿಯಾಟ್ ಎಜುಕೇಷನ್ ಅಂಡ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಆಗಾ ಸುಲ್ತಾನ್ ಮಾತನಾಡಿ, ಇರಾಕ್ ದೇಶದಲ್ಲಿ ಶಿಯಾ ಹಾಗೂ ಸುನ್ನಿಗಳು ಪರಸ್ಪರ ಸಹೋದರರಂತೆ ಬಾಳುತ್ತಿದ್ದಾರೆ. ಆದರೆ, ಪೂರ್ವಗ್ರಹಪೀಡಿತ ಮನಸ್ಸುಗಳು ಇದನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿವೆ ಎಂದರು.

ಇವತ್ತು ನಾವು ಚಿಕಿತ್ಸೆ ಕೊಡಿಸಿರುವ ಮಕ್ಕಳು ಅಹ್ಲೆ ಸುನ್ನತ್ ಪಂಗಂಡದವರು. ಇಸ್ಲಾಮ್ ಧರ್ಮ ಶಾಂತಿ, ಸಹೋದರತೆಯನ್ನು ಸಾರುತ್ತದೆ ಎಂಬುದನ್ನು ನಾವೆಲ್ಲ ನೆನಪಿಟ್ಟುಕೊಳ್ಳೊಣ ಎಂದು ಆಗಾ ಸುಲ್ತಾನ್ ಹೇಳಿದರು. ಈ ಸಂದರ್ಭದಲ್ಲಿ ಮುಜ್‌ತಬಾ ಹೈದರ್‌ನ ತಂದೆ ಅಬು ಮುಜ್‌ತಬಾ, ತಾತಾ ರೀಮ್ ನಾಸರ್ ಹುಸೇನ್, ಝೈದ್ ಅವರ ತಂದೆ ಉಮರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News