ಸುಮಲತಾ ಅಂಬರೀಷ್ ಫೋನ್ ಕದ್ದಾಲಿಕೆ: ಸಿ.ಟಿ ರವಿ ಆರೋಪ

Update: 2019-03-25 14:13 GMT

ಬೆಂಗಳೂರು, ಮಾ.25: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಫೋನ್ ಕದ್ದಾಲಿಕೆ ನಡೆಯುತ್ತಿದೆ. ಅಲ್ಲದೆ, ಅವರಿಗೆ ಬೆದರಿಕೆ ಕರೆಗಳೂ ಬರುತ್ತಿರುವುದರಿಂದ ಸುಮಲತಾ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡಿ, ವಾಹನ ಸಂಚಾರಕ್ಕೆ ಮಾರ್ಗ ಬದಲಿಸಲಾಗಿದೆ. ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಗಾಗಿ ಹೆದ್ದಾರಿಯನ್ನೇ ಬಂದ್ ಮಾಡಿ, ಸಾರ್ವಜನಿಕರಿಗೆ ತೊಂದರೆ ಕೊಡುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಸೋಲಿನಿಂದ ಹತಾಶರಾಗಿ ಸಿನಿಮಾ ನಟರ ವಿರುದ್ಧ ಹರಿಹಾಯುತ್ತಿದ್ದಾರೆ. ಸುಮಲತಾ ಅಂಬರೀಷ್ ಬೆಂಬಲವಾಗಿ ನಿಂತಿರುವ ದರ್ಶನ್ ಮತ್ತು ಯಶ್‌ರನ್ನು ಕಳ್ಳೆತ್ತುಗಳು ಎಂದು ಛೇಡಿಸಿದ್ದಾರೆ. ಅವರ ಪ್ರಕಾರ ಕಳ್ಳೆತ್ತುಗಳೇ ಆದರೆ, ಕುಮಾರಸ್ವಾಮಿ ಅವರು ಬೀದಿ ಬಸವನೇ? ಎಂದು ಅವರು ಪ್ರಶ್ನಿಸಿದರು.

ಸುಮಲತಾ ಅವರಿಗೆ ಮಂಡ್ಯದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಜನ ಬೆಂಬಲ ಇಲ್ಲದ ಕುಮಾರಸ್ವಾಮಿ ದುಡ್ಡು ನೀಡಿ, ಅಕ್ಕಪಕ್ಕದ ಜಿಲ್ಲೆಗಳಿಂದ ಜನರನ್ನು ಕರೆದು ತರುತ್ತಿದ್ದಾರೆ. ಅನುಕಂಪದ ಅಲೆಯ ಮುಂದೆ ಕುಮಾರಸ್ವಾಮಿ ಅವರ ಹಣ, ಅಧಿಕಾರ ಬಲ ನಡೆಯುವುದಿಲ್ಲ ಎಂದು ಸಿ.ಟಿ.ರವಿ ಹೇಳಿದರು.

ಮಂಡ್ಯದಲ್ಲಿ ಪುತ್ರನನ್ನು ಸೋಲಿನ ದವಡೆಯಿಂದ ಪಾರು ಮಾಡುವ ಪ್ರಯತ್ನವಾಗಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಬೆದರಿಕೆ ಒಡುವುದು, ಅಧಿಕಾರ ದುರುಪಯೋಗ ಮಾಡಿಕೊಳ್ಳುವುದು ಸ್ಪಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ವಿಶೇಷ ವೀಕ್ಷಕರನ್ನು ನಿಯುಕ್ತಿಗೊಳಿಸಬೇಕು. ಈ ಕ್ಷೇತ್ರವನ್ನು ಅತಿ ಸೂಕ್ಷ್ಮ ಕ್ಷೇತ್ರವೆಂದು ಘೊಷಿಸಬೇಕು ಎಂದು ಅವರು ಒತ್ತಾಯಿಸಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನು ಉಲ್ಲೇಖಿಸಿ ‘ಚೌಕಿದಾರ್ ಕಳ್ಳ’ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. 2004ರಲ್ಲಿ 55 ಲಕ್ಷ ರೂ.ನಷ್ಟಿದ್ದ ಅವರ ಆದಾಯ 2014ರಲ್ಲಿ ಶೇ.600ರಷ್ಟು ಏರಿಕೆಯಾಗಿದೆ. ಇನ್ನು ಅವರ ಶಿಷ್ಯರಾದ ಡಿ.ಕೆ.ಶಿವಕುಮಾರ್, ಕಾರ್ತಿ ಚಿದಂಬರಂ, ಅಕ್ರಮ ಆದಾಯ ಐಟಿ ದಾಳಿಗಳಿಂದ ಬಹಿರಂಗವಾಗಿದೆ ಎಂದು ಅವರು ಹೇಳಿದರು.

ಇದೇ ಕಳ್ಳರ ಗುಂಪು ಒಟ್ಟಾಗಿ ಸೇರಿ ಚೌಕಿದಾರ್‌ರನ್ನು ಕಳ್ಳ ಎಂದು ಕರೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ತಾನು ಕಳ್ಳ ಅಲ್ಲ ಎಂಬುದಾದರೆ, ಡಿ.ಕೆ.ಶಿವಕುಮಾರ್‌ರಿಂದ ರಾಜೀನಾಮೆ ಪಡೆಯಬೇಕಿತ್ತು. ಸರಕಾರ ಕಳ್ಳರ ಪರವಿದೆ ಎಂಬುದು ಸ್ಪಷ್ಟವಾಗಿದೆ. ಸರಕಾರ ಈ ಕೂಡಲೇ ಡಿ.ಕೆ.ಶಿವಕುಮಾರ್ ರಾಜೀನಾಮೆ ಪಡೆಯಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ರಾಜ್ಯ ಸಹ ವಕ್ತಾರ ಎ.ಎಚ್.ಆನಂದ್, ಅನ್ವರ್ ಮಾಣಿಪ್ಪಾಡಿ, ಸಾಮಾಜಿಕ ಮಾಧ್ಯಮ ರಾಜ್ಯ ಸಂಚಾಲಕ ಬಾಲಾಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News