ಬಿಜೆಪಿಗೆ ಮಾಜಿ ಸಚಿವ ಬಾಬುರಾವ್ ಚವ್ಹಾಣ್ ರಾಜೀನಾಮೆ

Update: 2019-03-25 16:32 GMT

ಬೆಂಗಳೂರು, ಮಾ.25: ಭಾರತೀಯ ಜನತಾ ಪಾರ್ಟಿಯ ಸಂವಿಧಾನ ವಿರೋಧಿ ಹಾಗೂ ದಲಿತ ವಿರೋಧಿ ಧೋರಣೆಯನ್ನು ಖಂಡಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮಾಜಿ ಸಚಿವ ಬಾಬುರಾವ್ ಚವ್ಹಾಣ್ ತಿಳಿಸಿದರು.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಓಟಿಗಾಗಿ ಮಾತ್ರ ದಲಿತರ ಬಾಯಿಗೆ ತುಪ್ಪ ಸವರುತ್ತಿದೆ. ಅಧಿಕಾರಕ್ಕೆ ಬಂದ ನಂತರ ಶೋಷಿತ ಸಮುದಾಯವನ್ನು ರಕ್ಷಿಸುತ್ತಿರುವ ಸಂವಿಧಾನವನ್ನೇ ಸುಟ್ಟು ಹಾಕುವವರಿಗೆ ಪಕ್ಷವೂ ಬೆಂಬಲ ನೀಡುತ್ತಾ, ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಓಟಿಗೋಸ್ಕರ ಮಾತ್ರ ದಲಿತ ಸಮುದಾಯ ಬೇಕು. ಆದರೆ, ಪಕ್ಷದಲ್ಲಿ ದಲಿತರಿಗೆ ಸೂಕ್ತ ಸ್ಥಾನ-ಮಾನ ಸಿಗುತ್ತಿಲ್ಲ. ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಎಂಬ ತತ್ವದ ಮಾತುಗಳು ಕಳೆದ ಮೂರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಕೇವಲ ಹೇಳಿಕೆ ಮಾತುಗಳಾಗಿದೆಯೇ ಹೊರತು ಕಾರ್ಯರೂಪದಲ್ಲಿ ಅದನ್ನು ಕಾಣಲು ಸಾಧ್ಯವಾಗಲಿಲ್ಲ. ದಲಿತ ಕೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಊಟ ಮಾಡಿದ್ದು ಬಿಟ್ಟರೆ ಸಮುದಾಯವನ್ನು ಯಾವೊಂದು ಕೆಲಸಕ್ಕೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಮಾಜವನ್ನು ತುಳಿದಿದ್ದಾರೆ ಎಂದು ವಿಷಾದಿಸಿದರು.

ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಹುದ್ದೆಯನ್ನು ನೀಡಿದ ದಿನದಿಂದಲೂ ಇಲ್ಲಿಯವರೆಗೂ ನನ್ನನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿದೆ. ಪಕ್ಷದ ವೇದಿಕೆ ಕಾರ್ಯಕ್ರಮಗಳಲ್ಲೂ ನನ್ನ ಹೆಸರನ್ನು ಪ್ರಸ್ತಾಪಿಸದೆ ಅಗೌರವ ತೋರಿಸಿದ್ದಾರೆ. ಲಂಬಾಣಿ ಸಮಾಜದ ಪ್ರಭಾವಿ ನಾಯಕನಾಗಿ ಹಾಗೂ ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷನಾಗಿ ಸಮುದಾಯದ ಲಕ್ಷಾಂತರ ಜನರ ಪ್ರತಿನಿಧಿಯಾಗಿರುವ ನನ್ನನ್ನು ಬಿಜೆಪಿ ಪಕ್ಷ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಅನೈತಿಕ ರಾಜಕಾರಣ: ತುಳಿಯುವ ರಾಜಕಾರಣದಲ್ಲಿ ಬಿಜೆಪಿ ಮೊದಲಿನಿಂದಲೂ ಮುಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಒಬ್ಬರನ್ನು ತುಳಿದು ಮತ್ತೊಬ್ಬರನ್ನು ಬೆಳೆಸುವ ಚಾಳಿ ಬಿಜೆಪಿಗೆ ಹೊಸದೇನೂ ಅಲ್ಲ. ಅಂತೆಯೇ ರೇವೂ ನಾಯಕ ಬೆಳಮಗಿ ಅವರನ್ನು ತುಳಿಯಲು ನನ್ನನ್ನು ಬಳಸಿಕೊಂಡರು. ಇದೀಗ ನನ್ನನ್ನು ತುಳಿಯಲು ಉಮೇಶ್ ಜಾಧವ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಇಂತಹ ಅನೈತಿಕ ರಾಜಕರಣದಿಂದ ಬಿಜೆಪಿ ತೊರೆಯುವಂತೆ ಮಾಡಿದೆ ಎಂದು ಬಾಬುರಾವ್ ಚವ್ಹಾಣ್ ಬೇಸರಪಟ್ಟರು.

ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಬೆಲೆಯೇ ಇಲ್ಲ. ದೇಶದ ಸಂವಿಧಾನದ ಮೂಲ ಉದ್ದೇಶಗಳನ್ನು ಬುಡಮೇಲು ಮಾಡುವ ಪ್ರಯತ್ನ ಬಿಜೆಪಿಯಿಂದ ನಡೆಯುತ್ತಾ ಬಂದಿದ್ದು, ಸಂವಿಧಾನಕ್ಕೆ ಚ್ಯುತಿ ಬರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಆಡಳಿತ ನಡೆಯುತ್ತಿರುವುದರಿಂದ ನಾನು ಮನನೊಂದಿದ್ದೇನೆ.

-ಬಾಬುರಾವ್ ಚವ್ಹಾಣ್, ಬಿಜೆಪಿಯ ರಾಜ್ಯ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News