ಐಟಿ ಅಧಿಕಾರಿಗಳ ಹೆಸರಿನಲ್ಲಿ ಖದೀಮರ ಬೆದರಿಕೆ

Update: 2019-03-25 17:12 GMT

ಬೆಂಗಳೂರು, ಮಾ.25: ಲೋಕಸಭಾ ಚುನಾವಣೆಯನ್ನು ದುರ್ಬಳಕೆ ಮಾಡಿಕೊಂಡು ಕೆಲವು ಖದೀಮರು ಐಟಿ ಅಧಿಕಾರಿಗಳ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ.

ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾದ ನಂತರ ಎಲ್ಲೆಡೆ ಐಟಿ ಅಧಿಕಾರಿಗಳು ಹಣದ ಆಮಿಷವೊಡ್ಡುವ, ಮತದಾರರನ್ನು ಓಲೈಸಿಕೊಳ್ಳುವವರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಮತ್ತೊಂದು ಕಡೆ ಖದೀಮರು ಐಟಿ ಇಲಾಖೆಯ ಹೆಸರು ದುರ್ಬಳಕೆ ಮಾಡಿಕೊಂಡು ಹಣದ ದಂಧೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚಿಗೆ ನಿವೃತ್ತ ವೈದ್ಯರೊಬ್ಬರಿಗೆ ಮಂಜುನಾಥ್ ನಾಯಕ್ ಎಂಬ ವ್ಯಕ್ತಿ ಕರೆ ಮಾಡಿ ನಾನು ಐಟಿ ಇಲಾಖೆಯ ಜಂಟಿ ಆಯುಕ್ತ ಎಂದು ಪರಿಚಯ ಮಾಡಿಕೊಂಡಿದ್ದಾರೆ. ನಿಮ್ಮ ಮೇಲೆ ಸಾರ್ವಜನಿಕರಿಂದ ದೂರು ಇದ್ದು, ಸರ್ಚ್ ವಾರೆಂಟ್ ಇದೆ ಅಂತ ಬೆದರಿಕೆ ಹಾಕಿದ್ದಾರೆ ಎಂದು ಡಾ.ಡಿ.ಎಲ್.ಮಹೇಶ್ವರ್ ಎಂಬುವವರು ಯಶವಂತಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಲೋಕಸಭಾ ಚುನಾವಣೆ ಇನ್ನಷ್ಟು ಅಕ್ರಮ ಹಣ ಹಂಚಿಕೆಯ ವಿರುದ್ಧ ಆದಾಯ ತೆರಿಗೆ ಇಲಾಖೆ ತನ್ನ ಹದ್ದಿನ ಕಣ್ಣಿಟ್ಟಿದ್ದು ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ-ಗೋವಾ ವಲಯದ ಐಟಿ ಕೇಂದ್ರ ಕಚೇರಿಯಲ್ಲಿ 24/7 ಕಂಟ್ರೋಲ್ ರೂಂ ತೆರೆಯಲಾಗಿದೆ. ಚುನಾವಣಾ ಫಲಿತಾಂಶ ಹೊರಬೀಳುವವರೆಗೂ ಈ ಕಂಟ್ರೋಲ್ ರೂಂ ಕಾರ್ಯ ನಿರ್ವಹಿಸಲಿದ್ದು, ಅಲ್ಲಿಯವರೆಗೂ ಚುನಾವಣಾ ನಿಮಿತ್ತ ಹಣ ಹಂಚಿಕೆ, ಅಕ್ರಮ ಹಣ ವರ್ಗಾವಣೆಯಂತಹ ಯಾವುದೇ ಚಟುವಟಿಕೆಗಳು ಕಂಡು ಬಂದರೇ ಯಾರು ಬೇಕಾದರೂ ನೇರವಾಗಿ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News