‘ಮೆಡಿಕಲ್ ಸೀಟು ನಿರಾಕರಿಸಿ ಕೃಷಿ ಕೋರ್ಸ್ ಆಯ್ಕೆ ಮಾಡಿಕೊಂಡೆ’

Update: 2019-03-25 18:15 GMT

ಬೆಂಗಳೂರು, ಮಾ.25: ದ್ವಿತೀಯ ಪಿಯುಸಿ ನಂತರ ಮೆಡಿಕಲ್‌ಗೆ ಅರ್ಹತಾ ಪರೀಕ್ಷೆ ಬರೆದಿದ್ದೆ. ಅಲ್ಲಿ ಸೀಟು ಸಿಕ್ಕಿದ್ದರೂ ಅದನ್ನು ನಿರಾಕರಿಸಿ, ಕೃಷಿಯಲ್ಲಿ ಪದವಿ ಮಾಡಲು ಇಚ್ಛಿಸಿದೆ. ಇವತ್ತು ನನಗೆ ಅತ್ಯಂತ ಸಂತೋಷದ ಕ್ಷಣವಾಗಿದೆ.

ಇದು ಕೃಷಿಯಲ್ಲಿ ಬಿಎಸ್ಸಿ ಮುಗಿಸಿ, ಅತಿ ಹೆಚ್ಚು ಚಿನ್ನದ ಪದಕ ಹಾಗೂ ಪ್ರಮಾಣ ಪತ್ರಗಳನ್ನು ಪಡೆದುಕೊಂಡ ಚಿಂತಾಮಣಿ ರೇಷ್ಮೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕೆ.ಸುಮ ಅವರ ಮನದಾಳದ ಮಾತುಗಳು.

ಸೋಮವಾರ ನಗರದ ಜಿಕೆವಿಕೆಯಲ್ಲಿ ಆಯೋಜಿಸಿದ್ದ 53ನೇ ಘಟಿಕೋತ್ಸವದಲ್ಲಿ ಪದಕಗಳನ್ನು ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಶಾಲಾ ದಿನಗಳಿಂದಲೇ ಆಲೋಚನೆ ಮಾಡುತ್ತಿದ್ದೆ. ಇದೀಗ ಅದು ಸಾರ್ಥಕವಾಗಿದೆ ಎಂದರು.

ನಮ್ಮ ತಂದೆ ಜಿಕೆವಿಕೆಯಲ್ಲಿಯೇ ಉದ್ಯೋಗ ಮಾಡುತ್ತಿದ್ದಾರೆ. ಅವರ ಸ್ಪೂರ್ತಿಯಿಂದಲೇ ನಾನಿಂದು ಕೃಷಿ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಾಗಿದೆ. ಪಿಯುಸಿ ನಂತರ ವೆುಡಿಕಲ್‌ಗೆ ಆಯ್ಕೆಯಾಗಿದ್ದರೂ ಮನಸ್ಸು ಒಪ್ಪದಿದ್ದರಿಂದ ಅದನ್ನು ನಿರಾಕರಿಸಿ, ಚಿಂತಾಮಣಿಯಲ್ಲಿ ರೇಷ್ಮೆ ಕೃಷಿಗೆ ಸೇರಿದೆ. ಅಂದಿನಿಂದ ಕಷ್ಟಪಟ್ಟು ಅಭ್ಯಾಸ ಮಾಡುತ್ತಿದ್ದೆ. ನಮ್ಮ ಉಪನ್ಯಾಸಕರು ಹಾಗೂ ಪೋಷಕರ ಸಹಕಾರದಿಂದ ನಾನಿಂದು ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಕೃಷಿಯಲ್ಲಿ ಬಿಎಸ್ಸಿ ಮಾಡಬೇಕು ಎಂದು ಮೊದಲಿನಿಂದಲೂ ಆಸೆಯಿತ್ತು. ನಮ್ಮ ಕುಟುಂಬದಲ್ಲಿ ಓದಿಸಲು ಸಾಧ್ಯವಾದ ಸ್ಥಿತಿಯಿದ್ದರೂ ನನಗೆ ಪ್ರೋತ್ಸಾಹ ನೀಡಿದರು. ಅದರಿಂದಲೇ ನಾನಿಂದು ಏನಾದರೂ ಸಾಧನೆ ಮಾಡಲು ಸಾಧ್ಯವಾಗಿರುವುದು. ಇಂದಿನ ನನ್ನೆಲ್ಲಾ ಸಾಧನೆಯನ್ನು ನಮ್ಮ ತಂದೆ-ತಾಯಿ ಹಾಗೂ ಬೋಧಕರಿಗೆ ಸಮರ್ಪಿಸುತ್ತೇನೆ ಎಂದು ಆರು ಚಿನ್ನದ ಪದಕಗಳನ್ನು ಪಡೆದಿರುವ ಮಂಡ್ಯ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿ ಟಿ.ಡಿ.ಗೌಡ ತಮ್ಮ ಅನುಭವ ಹಂಚಿಕೊಂಡರು.

ನಮ್ಮದು ಸುಮಾರು ಎಂಟು ಎಕರೆ ಜಮೀನಿದೆ. ಆದರೆ, ಮನೆಯ ಪರಿಸ್ಥಿತಿಯು ನಾನೀಗ ಒಂದು ಕೆಲಸಕ್ಕೆ ಸೇರಿಕೊಳ್ಳುವ ಕಡೆಗೆ ಸೆಳೆಯುತ್ತಿದೆ. ಅಪ್ಪ ಯಾವುದಾದರೂ ಕೆಲಸ ಪಡೆಯಲಿ ಎಂದು ಆಶಿಸುತ್ತಿದ್ದಾರೆ. ಆದರೆ, ನನ್ನ ವಿದ್ಯಾಭ್ಯಾಸಕ್ಕೆ ಅಡ್ಡಿಯಿಲ್ಲ. ನಾನು ಕೃಷಿಯಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಅಂದುಕೊಂಡಿದ್ದೇನೆ. ಈ ಕ್ಷೇತ್ರದಲ್ಲಿಯೇ ಸಾಧಿಸಿ ತೋರಿಸುವ ಛಲವಿದೆ ಎಂದರು.

ಕೃಷಿ ಎಂಬುದು ಸತ್ಯವಾದ ವಿಜ್ಞಾನ. ಇಲ್ಲಿ ಕ್ಷಣ ಕ್ಷಣಕ್ಕೊಂದು ಸಾಧನೆ ಮಾಡಲು ಹಲವು ದಾರಿಗಳಿವೆ. ಇತ್ತೀಚಿನ ದಿನಗಳಲ್ಲಿ ಕಾರ್ಪೋರೇಟ್ ವ್ಯವಸ್ಥೆ ಬೆಳೆಯುತ್ತಿದ್ದು, ಕೃಷಿಗೆ ಸಿಗುತ್ತಿರುವ ಆದ್ಯತೆ ಕಡಿಮೆ ಎನ್ನುತ್ತಿದ್ದಾರೆ. ಆದರೆ, ಈ ವ್ಯವಸ್ಥೆ ಬೆಳೆದಂತೆಲ್ಲಾ ಮುಂದೊಂದು ದಿನ ಕೃಷಿಗೆ ಮಾರುಕಟ್ಟೆ ಅಧಿಕವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳ ಬೆಲೆಗಳು ಅಧಿಕವಾಗುತ್ತವೆ. ಅದಕ್ಕೆ ತಕ್ಕಂತೆ ಸರಕಾರಗಳು ಯೋಜನೆಗಳನ್ನು ರೂಪಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ನಾನು ಕೃಷಿಯಲ್ಲಿ ಬಿಎಸ್ಸಿಗೆ ಅನಿರೀಕ್ಷಿತವಾಗಿ ಸೇರಿದೆ. ಆದರೆ, ಇಲ್ಲಿಗೆ ಬಂದ ಮೇಲೆ ಸರಿಯಾದ ಆಯ್ಕೆ ಮಾಡಿಕೊಂಡಿದ್ದೇನೆ ಎನಿಸಿತು. ಕಡ್ಡಾಯವಾಗಿ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಅದರಿಂದಲೇ ಇಂದು ನಾನು ಆರು ಚಿನ್ನದ ಪದಕ ಪಡೆಯುವಂತೆ ಮಾಡಿದೆ ಎಂದು ಕೃಷಿ ಮಾರುಕಟ್ಟೆ ಹಾಗೂ ಸಹಕಾರ ವಿಭಾಗದಲ್ಲಿ ಬಿಎಸ್ಸಿ ಅಧ್ಯಯನ ಮಾಡಿದ ವಿದ್ಯಾರ್ಥಿನಿ ವೈ.ಎಲ್.ರಂಜಿತ ಅನುಭವ ಹಂಚಿಕೊಂಡರು.

ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ನನ್ನದಾಗಿದೆ. ಅದಕ್ಕಾಗಿ ಪದವಿ ಅಗತ್ಯವಿದ್ದರಿಂದ ಇದಕ್ಕೆ ಸೇರಿದೆ. ಇಲ್ಲಿಗೆ ಬಂದ ನಂತರ ಕೃಷಿ ಕ್ಷೇತ್ರದ ಕುರಿತು ಹಲವಾರು ಮಹತ್ವವಾದ ವಿಚಾರಗಳು ನನ್ನನ್ನು ಸೆಳೆದವು. ಇದು ನನಗೆ ಸ್ಪೂರ್ತಿಯಾಗಿದೆ. ಆದರೆ, ಇಲ್ಲಿ ನಾವೆಷ್ಟು ಸಂಶೋಧನೆಗಳು ಮಾಡಿದರೂ ಅದನ್ನು ಜಾರಿಗೆ ತರಲು ಕಾನೂನಿನ ಅಗತ್ಯವಿದೆ. ಆದುದರಿಂದಾಗಿ ನಾನು ಅಧಿಕಾರಿಯಾಗಿ ಹೆಚ್ಚಿನ ಸೇವೆ ಸಲ್ಲಿಸಬೇಕು ಎಂದುಕೊಂಡಿದ್ದೇನೆ ಎಂದು ತಮ್ಮ ಕನಸನ್ನು ಬಿಚ್ಚಿಟ್ಟರು.

ಇದೇ ಸಂದರ್ಭದಲ್ಲಿ ವಿವಿಧ ಪದವಿಗಳ ವಿದ್ಯಾರ್ಥಿಗಳಿಗೆ 119 ಚಿನ್ನದ ಪದಕ ನೀಡಿದ್ದು, ಅದರಲ್ಲಿ 39 ವಿಶ್ವವಿದ್ಯಾನಿಲಯದ ಚಿನ್ನದ ಪದವಿ, 3 ಸ್ನಾತಕ ಮತ್ತು 4 ಸ್ನಾತಕೋತ್ತರ ಆವರಣ ಚಿನ್ನದ ಪದಕ ಹಾಗೂ 73 ದಾನಿಗಳ ಚಿನ್ನದ ಪದಕ, 21 ಚಿನ್ನದ ಪದಕ ಪ್ರಮಾಣ ಪತ್ರವನ್ನು ಅರ್ಹ ವಿದ್ಯಾರ್ಥಿಗಳಿಗೆ ನೀಡಲಾಯಿತು.

661 ಸ್ನಾತಕ ಪದವಿ, 309 ಸ್ನಾತಕೋತ್ತರ ಪದವಿ ಹಾಗೂ 72 ಡಾಕ್ಟೊರಲ್ ಪದವಿ ನೀಡಲಾಯಿತು. ಡಾಕ್ಟೊರಲ್ ಪದವಿಯಲ್ಲಿ 8 ವಿದ್ಯಾರ್ಥಿನಿಯರು, 6 ವಿದ್ಯಾರ್ಥಿಗಳು, 12 ವಿಶ್ವವಿದ್ಯಾನಿಲಯದ ಅರ್ಹತಾ ಚಿನ್ನದ ಪದಕ ಹಾಗೂ 8 ದಾನಿಗಳ ಚಿನ್ನದ ಪದಕಗಳನ್ನು ನೀಡಲಾಯಿತು.

ಇಂದು ನನ್ನೆಲ್ಲಾ ಸಾಧನೆಯನ್ನು ನನ್ನ ತಂದೆ-ತಾಯಿಗೆ ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಪಿಎಚ್‌ಡಿ ಮಾಡುವ ಮೂಲಕ ರೈತರಿಗೆ ಅನುಕೂಲವಾಗುವ ಹೊಸ ತಳಿಗಳ ಆವಿಷ್ಕಾರ ಮಾಡಬೇಕು ಎಂದುಕೊಂಡಿದ್ದೇನೆ. ಅಲ್ಲದೆ, ಮುಂದೆ ಯುಪಿಎಸ್‌ಸಿಗೆ ಓದುವ ಅಭಿಲಾಷೆಯಿದೆ.

-ಕೆ.ಸುಮ, ರೇಷ್ಮೆ ಮಹಾವಿದ್ಯಾಲಯ ಚಿಂತಾಮಣಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News