ಪ್ರಧಾನಿ ಫೋಟೊ ಇರುವ ಬೋರ್ಡಿಂಗ್ ಪಾಸ್ ಹಿಂಪಡೆದ ಏರ್ ಇಂಡಿಯಾ

Update: 2019-03-26 05:11 GMT

ಹೊಸದಿಲ್ಲಿ, ಮಾ.26: ವಿಮಾನ ಪ್ರಯಾಣಿಕರ ಬೋರ್ಡಿಂಗ್ ಪಾಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಫೋಟೊ ಇರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವಂತೆಯೇ ಎಚ್ಚೆತ್ತುಕೊಂಡಿರುವ ಸರಕಾರಿ ಸಂಸ್ಥೆ ಏರ್‌ಇಂಡಿಯಾ, ಇಂತಹ ಬೋರ್ಡಿಂಗ್ ಪಾಸ್‌ಗಳನ್ನು ವಾಪಾಸು ಪಡೆಯಲು ನಿರ್ಧರಿಸಿದೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಏರ್‌ಇಂಡಿಯಾ ಈ ಕ್ರಮ ಕೈಗೊಂಡಿದೆ. ರೈಲ್ವೇ ಟಿಕೆಟ್‌ಗಳಲ್ಲಿ ಪ್ರಧಾನಿ ಮೋದಿಯ ಫೋಟೋ ಇರುವ ಬಗ್ಗೆ ಕೆಲ ದಿನಗಳ ಹಿಂದೆ ತೃಣಮೂಲ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕ ರೈಲ್ವೇ ಇಲಾಖೆ ಈ ಟಿಕೆಟ್‌ಗಳನ್ನು ವಾಪಸು ಪಡೆದಿತ್ತು.

ಪ್ರಧಾನಿ ಮೋದಿ ಹಾಗೂ ಗುಜರಾತ್ ಮುಖ್ಯಮಂತ್ರಿಯ ಫೋಟೋ ಇರುವ ‘ವೈಬ್ರೆಂಟ್ ಗುಜರಾತ್’ ಪ್ರಚಾರ ಜಾಹೀರಾತನ್ನು ಒಳಗೊಂಡಿರುವ ಬೋರ್ಡಿಂಗ್ ಪಾಸ್ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಏರ್ ಇಂಡಿಯಾ ವಕ್ತಾರ ಧನಂಜಯ್ ಕುಮಾರ್ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸೋಮವಾರ ಬೆಳಿಗ್ಗೆ ಪಂಜಾಬ್ ಪೊಲೀಸ್ ಪಡೆಯ ನಿವೃತ್ತ ಅಧಿಕಾರಿ ಶಶಿಕಾಂತ್ ಎಂಬವರು ಏರ್ ಇಂಡಿಯಾ ಬೋರ್ಡಿಂಗ್ ಪಾಸ್ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ವೈಬ್ರೆಂಟ್ ಗುಜರಾತ್‌ನ ಜಾಹೀರಾತಿನಲ್ಲಿ ಪ್ರಧಾನಿ ಹಾಗೂ ಗುಜರಾತ್ ಮುಖ್ಯಮಂತ್ರಿಯ ಫೋಟೊ ಇದರಲ್ಲಿದೆ. ಏನನ್ನೂ ಕೇಳಿಸಿಕೊಳ್ಳದ, ಅಥವಾ ನೋಡಲು ಶಕ್ತವಾಗಿಲ್ಲದ, ಮಾತಾಡಲೂ ಬಾರದ ಚುನಾವಣಾ ಆಯೋಗದ ಅಗತ್ಯ ನಮಗಿದೆಯೇ ಎಂದವರು ಪ್ರಶ್ನಿಸಿದ್ದರು.

ಇದಕ್ಕೆ ಸ್ಪಷ್ಟನೆ ನೀಡಿದ್ದ ಏರ್‌ಇಂಡಿಯಾ, ವೈಬ್ರೆಂಟ್ ಗುಜರಾತ್ ಎಂಬುದು ಮೂರನೇ ವ್ಯಕ್ತಿ(ಥರ್ಡ್ ಪಾರ್ಟಿ)ಯ ಜಾಹೀರಾತು ಆಗಿದ್ದು ಜನವರಿಯಲ್ಲಿ ನಡೆದಿದ್ದ ವೈಬ್ರೆಂಟ್ ಗುಜರಾತ್ ಸಮಾವೇಶದ ಸಂದರ್ಭ ಜಾರಿಗೊಳಿಸಲಾಗಿದೆ. ಇದು ಗುಜರಾತ್ ಮಾತ್ರವಲ್ಲ, ದೇಶದಾದ್ಯಂತದ ಏರ್‌ಇಂಡಿಯಾ ಬೋರ್ಡಿಂಗ್ ಪಾಸ್‌ನಲ್ಲಿ ಅಚ್ಚಾಗಿದೆ. ಸದ್ಯಕ್ಕೆ ಈ ಬೋರ್ಡಿಂಗ್ ಪಾಸ್‌ಗಳನ್ನು ತಡೆಹಿಡಿಯಲಾಗಿದೆ. ಮೂರನೇ ವ್ಯಕ್ತಿಯ ಜಾಹೀರಾತು ನೀತಿ ಸಂಹಿತೆಯಡಿ ಬರುತ್ತದೆಯೇ ಎಂಬುದನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News