ಪಕ್ಷಾಂತರಿಗಳಿಗೆ ಬಿಜೆಪಿ ಟಿಕೆಟ್ ಗೆ ವಿರೋಧ: ಆರೆಸೆಸ್ಸ್ ಮಾಜಿ ಪ್ರಚಾರಕ ಪಕ್ಷೇತರ ಸ್ಪರ್ಧೆ

Update: 2019-03-26 15:37 GMT

ಬೆಂಗಳೂರು, ಮಾ. 26: ‘ಶ್ರೀಮಂತರು, ಭ್ರಷ್ಟರು ಮತ್ತು ಪಕ್ಷಾಂತರಿಗಳಿಗೆ ಬಿಜೆಪಿ ಟಿಕೆಟ್’ ನೀಡಿರುವುದನ್ನು ವಿರೋಧಿಸಿ ಆರೆಸ್ಸೆಸ್ ಮಾಜಿ ಪ್ರಚಾರಕ ಎನ್. ಹನುಮೇಗೌಡ ಬೆಂಗಳೂರು ಉತ್ತರ ಕ್ಷೇತ್ರದಿಂದ ಆರೆಸ್ಸೆಸ್ ‘ಗಣವೇಷ’ದಲ್ಲೇ ನಾಮಪತ್ರ ಸಲ್ಲಿಸಿದ್ದಾರೆ.

ಮಂಗಳವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿನ ಬೆಂಗಳೂರು ನಗರ ಜಿಲ್ಲಾ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಚುನಾವಣಾಧಿಕಾರಿಗಳಿಗೆ ಕಚೇರಿಗೆ ನಾಲ್ಕೈದು ಮಂದಿ ಸ್ನೇಹಿತರೊಂದಿಗೆ ಆರೆಸ್ಸೆಸ್ ಗಣವೇಷದಲ್ಲಿ ಆಗಮಿಸಿದ ಹನುಮೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹನುಮೇಗೌಡ, ಆರೆಸ್ಸೆಸ್ ಎಂದರೆ ದೇಶಸೇವೆ, ಶಿಸ್ತಿಗೆ ಹೆಸರಾಗಿದೆ. ಆದರೆ, ಇಂದು ಆರೆಸೆಸ್ಸ್ ಬೆಂಬಲಿಸುವ ಬಿಜೆಪಿ ಭ್ರಷ್ಟರು, ಶ್ರೀಮಂತರು ಹಾಗೂ ಪಕ್ಷಾಂತರಿಗಳಿಗೆ ಟಿಕೆಟ್ ನೀಡುತ್ತಿದೆ. ರಾಜ್ಯದ 28 ಲೋಕಸಭೆ ಅಭ್ಯರ್ಥಿಗಳ ಪೈಕಿ ಬಿಜೆಪಿ 19 ಮಂದಿ ಭ್ರಷ್ಟರು, ಶ್ರೀಮಂತರು ಹಾಗೂ ಪಕ್ಷಾಂತರಿಗಳಿಗೆ ಮಣೆ ಹಾಕಿದ್ದಾರೆ. ‘ದೇಶಭಕ್ತ’ ಆರೆಸೆಸ್ಸ್ ಸಂಘ ಸಮಯ ಸಾಧಕರಿಗೆ ಆದ್ಯತೆ ನೀಡುತ್ತಿರುವುದು ನಿಜಕ್ಕೂ ಖಂಡನೀಯ ಎಂದು ಟೀಕಿಸಿದರು.

ಸಂಘಟನೆ, ಶಿಸ್ತು, ಬದ್ಧತೆಗೆ ಹೆಸರಾಗಿರುವ ಆರೆಸ್ಸೆಸ್ ಎಂತಹ ವ್ಯಕ್ತಿಗಳಿಗೆ ಮನ್ನಣೆ ನೀಡುತ್ತಿದೆ. ಕೋಟ್ಯಾಂತರ ಮಂದಿ ಆರೆಸೆಸ್ಸ್ ಪರಿವಾರದ ಶ್ರಮದಿಂದ ಬಂದ ಮೃಷ್ಟಾನ್ನ ಯಾರು ಉಣ್ಣುತ್ತಿದ್ದಾರೆಂಬುದು ದೇಶದ ಜನರಿಗೆ ಗೊತ್ತಾಗಬೇಕೆಂದು ಸ್ಪರ್ಧಿಸಿದ್ದೇನೆ. ನನ್ನ ಗೆಲುವು-ಸೋಲು ಇಲ್ಲಿ ಮುಖ್ಯವಲ್ಲ ಎಂದು ಹನುಮೇಗೌಡ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News