ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದತ್ತ ಹೆಚ್ಚು ಆಕರ್ಷಿತರಾಗಲಿ: ಪ್ರೊ.ಸಿ.ಎನ್.ಆರ್.ರಾವ್

Update: 2019-03-26 15:42 GMT

ಬೆಂಗಳೂರು, ಮಾ.26: ಮನುಕುಲದ ಬೆಳವಣಿಗೆ ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಗೆ ವಿಜ್ಞಾನ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು, ವಿದ್ಯಾರ್ಥಿಗಳು ಈ ಕ್ಷೇತ್ರದತ್ತ ಹೆಚ್ಚು ಆಕರ್ಷಿತರಾಗಬೇಕೆಂದು ಭಾರತರತ್ನ ಪ್ರೊ.ಸಿ.ಎನ್.ಆರ್. ರಾವ್ ಆಶಿಸಿದರು.

ಮಂಗಳವಾರ ನಿಮ್ಹಾನ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ನಿರ್ದಿಷ್ಟ ವಿಷಯಗಳತ್ತ ಕುತೂಹಲ ಬೆಳೆಸಿಕೊಳ್ಳಬೇಕು. ಸೂಕ್ಷ್ಮವಾಗಿ ಅಭ್ಯಾಸ ಮಾಡಬೇಕು. ಸ್ವಯಂ ಯೋಚಿಸುವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಭವಿಷ್ಯದ ಅತ್ಯುತ್ತಮ ವಿಜ್ಞಾನಿಗಳಾಗಿ ಬೆಳೆಯಬೇಕು ಎಂದು ಸಲಹೆ ಮಾಡಿದರು.

ವಿಜ್ಞಾನ ವಿಷಯದ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಕುರಿತು ಪಠ್ಯದಾಚೆಗಿನ ವಿಷಯದ ಕುರಿತು ಹೆಚ್ಚು ಕುತೂಹಲವನ್ನು ಹೊಂದಿರಬೇಕು. ಇಂತಹ ಮನೋಭಾವದಿಂದ ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರವಾದುದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ವಿವಿಯ ಕುಲಪತಿ ಡಾ.ಎಸ್.ಸಚ್ಚಿದಾನಂದ ಮಾತನಾಡಿ, ವಿವಿಯ ಎಲ್ಲ ವಿಭಾಗದ ಒಟ್ಟು ಫಲಿತಾಂಶ ಶೇ.81.11 ಆಗಿದೆ. ಈ ವರ್ಷ ದಂತ ವೈದ್ಯ ಡಾ.ಕೆ.ಎಸ್.ನಾಗರಾಜು ಅವರಿಗೆ ಡಾಕ್ಟರ್ ಆಫ್ ಸೈನ್ಸ್(ಗೌರವ ಡಾಕ್ಟರೇಟ್) ಪ್ರದಾನ ಮಾಡಲಾಯಿತು. ಭಾರತೀಯ ವೈದ್ಯಕೀಯ ಪರಿಷತ್(ಎಂಸಿಐ) ಆಡಳಿತ ಮಂಡಳಿಯು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳ ಉಳಿಕೆ ಸೀಟುಗಳನ್ನು ಎಂಡಿ ಮತ್ತು ಎಂಎಸ್ ಸೀಟಗಳಿಗೆ ವರ್ಗಾಯಿಸಲು ಅನುಮತಿ ನೀಡಿದೆ ಎಂದರು.

ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ವಿ.ಆರ್. ವಾಲಾ ವಹಿಸಿದ್ದರು. ವಿವಿಯ ವಿವಿಧ ವಿಭಾಗದ ಮುಖ್ಯಸ್ಥರು ಸೇರಿದಂತೆ ಪ್ರಮುಖರಿದ್ದರು.

ಮಂಗಳೂರಿನ ಎ.ಜೆ.ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪದವಿ ವಿದ್ಯಾರ್ಥಿ ಡಾ.ವಲ್ಲೀಶ್ ಶೆಣೈ ಏಳು ಸ್ವರ್ಣ ಪದಕಗಳು ಮತ್ತು ಒಂದು ನಗದು ಬಹುಮಾನ ಪಡೆದುಕೊಂಡು ವಿಶ್ವವಿದ್ಯಾಲಯಕ್ಕೆ ಟಾಪರ್ ಆಗಿದ್ದಾರೆ. ಒಟ್ಟು 30,556 ಅಭ್ಯರ್ಥಿಗಳು ತೇರ್ಗಡೆ ಹೊಂದಿ ಘಟಿಕೋತ್ಸವದಲ್ಲಿ ಪದವಿ ಪಡೆದರು. ಇದರಲ್ಲಿ 44 ಪಿಎಚ್‌ಡಿ, 129 ಸೂಪರ್ ಸ್ಪೆಷಾಲಿಟಿ(ಡಿಎಂ, ಎಂಸಿಎಚ್), 5,711 ಸ್ನಾತಕೋತ್ತರ, 175 ಫೆಲೊಶಿಪ್ ಕೋರ್ಸ್, 16 ಪ್ರಮಾಣಪತ್ರ ಕೋರ್ಸ್ ಮತ್ತು 24,481 ಪದವಿ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News