ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ವೇಳೆ ಪ್ರಮುಖರ ಗೈರು: ನಾಯಕರ ಮಧ್ಯೆ ಭಿನ್ನಮತ ?

Update: 2019-03-26 15:55 GMT

ಬೆಂಗಳೂರು, ಮಾ.26: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಪಡೆದುಕೊಂಡಿರುವ ಬಿಜೆಪಿ ಯುವ ಮೋರ್ಚಾ ಮುಖಂಡ ತೇಜಸ್ವಿ ಸೂರ್ಯ, ಮಂಗಳವಾರ ಜಯನಗರದ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಇವರ ನಾಮಪತ್ರ ಸಲ್ಲಿಕೆ ವೇಳೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ಶಾಸಕ ಉದಯ್ ಗರುಡಾಚಾರ್ ಉಪಸ್ಥಿತರಿದ್ದರು. ಆದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಆರ್.ಅಶೋಕ್, ಮಾಜಿ ಸಚಿವ ವಿ.ಸೋಮಣ್ಣ, ಶಾಸಕ ಸತೀಶ್ ರೆಡ್ಡಿ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಕೇಂದ್ರದ ಮಾಜಿ ಸಚಿವ ದಿ.ಅನಂತ್‌ಕುಮಾರ್ ಪತ್ನಿ ತೇಜಸ್ವಿನಿ ಅನಂತ್‌ಕುಮಾರ್‌ಗೆ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ನಾಯಕರ ಮಧ್ಯೆ ಭಿನ್ನಮತ ಪ್ರಾರಂಭವಾಗಿದೆ ಎನ್ನಲಾಗಿದೆ.

ನಾಮಪತ್ರ ಸಲ್ಲಿಸಲು ತಮ್ಮ ಪೋಷಕರೊಂದಿಗೆ ಬಿಬಿಎಂಪಿ ಕಚೇರಿಗೆ ಆಗಮಿಸಿದ್ದ ತೇಜಸ್ವಿ ಸೂರ್ಯ, ಬಿಜೆಪಿ ನಾಯಕರ ಆಗಮನಕ್ಕೆ ಕಾದು ಕುಳಿತರೂ ಯಾವುದೇ ಪ್ರಯೋಜನವಾಗಿಲ್ಲ. ಅಂತಿಮವಾಗಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಜೊತೆ ನಾಮಪತ್ರ ಸಲ್ಲಿಸಲು ಮುಂದಾದರು. ಆನಂತರ, ಶಾಸಕ ಉದಯ್ ಗರುಡಾಚಾರ್ ಆಗಮಿಸಿದರು.

ರಾಜ್ಯ ಬಿಜೆಪಿ ಕೋರ್ ಕಮಿಟಿಯಿಂದ ತೇಜಸ್ವಿನಿ ಅನಂತ್‌ಕುಮಾರ್ ಹೆಸರನ್ನು ಶಿಫಾರಸ್ಸು ಮಾಡಿದ್ದರೂ, ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡದೆ, ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿರುವ ಬಿಜೆಪಿ ವರಿಷ್ಠ ನಿರ್ಧಾರಕ್ಕೆ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದು, ತೇಜಸ್ವಿ ಸೂರ್ಯ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಶ್ವಥ್‌ನಾರಾಯಣ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದ ಆರ್.ಅಶೋಕ್, ಕಟ್ಟಾಸುಬ್ರಹ್ಮಣ್ಯ ನಾಯ್ಡು, ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ವೇಳೆ ಗೈರು ಹಾಜರಾಗಿದ್ದು, ಎಲ್ಲರ ಗಮನ ಸೆಳೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News