ಮಹಿಳಾ ಮೀಸಲಾತಿ ವಿರುದ್ಧದ 2014ರ ಟ್ವೀಟ್ ಡಿಲಿಟ್ ಮಾಡಿದ ತೇಜಸ್ವಿ ಸೂರ್ಯ

Update: 2019-03-26 16:42 GMT

ಬೆಂಗಳೂರು, ಮಾ.26: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೆತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪಕ್ಷದಲ್ಲೇ ಅತ್ಯಂತ ಯುವ ಅಭ್ಯರ್ಥಿ ಎಂಬ ಕಾರಣಕ್ಕಾಗಿ ಗಮನ ಸೆಳೆದಿದ್ದಾರೆ. ಆದರೆ ಇದೀಗ ಐದು ವರ್ಷಗಳ ಹಿಂದಿನ ಟ್ವೀಟ್ ಒಂದನ್ನು ಟೈಮ್‍ ಲೈನ್ ನಿಂದ ಕಿತ್ತುಹಾಕಿರುವ ಅವರ ಕ್ರಮದಿಂದ ಅವರ ಪಾಳಯಕ್ಕೆ ತೀವ್ರ ಮುಜುಗರದ ಸನ್ನಿವೇಶ ಎದುರಾಗಿದೆ.

ಬಿಜೆಪಿ ಯುವ ಮೋರ್ಚಾ ನಾಯಕ ತೇಜಸ್ವಿ ಸೂರ್ಯ (28) ವೃತ್ತಿಯಲ್ಲಿ ವಕೀಲ. ಮಹಿಳೆಯರಿಗೆ ಶಾಸನಸಭೆಯಲ್ಲಿ ಮೂರನೇ ಒಂದರಷ್ಟು ಮೀಸಲಾತಿ ನೀಡುವ ಪ್ರಸ್ತಾವಿತ ಕಾನೂನಿಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ವರ್ಷಗಳಿಂದ ಈ ಮಸೂದೆ ನನೆಗುದಿಗೆ ಬಿದ್ದಿದ್ದು, ಪಕ್ಷಭೇದ ಮರೆತು ಎಲ್ಲ ಪುರುಷ ಸಂಸದರು ಇದಕ್ಕೆ ತಡೆಯಾಗಿದ್ದಾರೆ.

ಈ ಮಸೂದೆ ತಮಗೆ ದಿಗಿಲು ಹುಟ್ಟಿಸಿದೆ ಎಂದು ತೇಜಸ್ವಿ ಹೇಳಿದ್ದರು. "ಮಹಿಳಾ ಮೀಸಲಾತಿ ಮಸೂದೆ ಹೊರತುಪಡಿಸಿ ಮೋದಿ ಸರ್ಕಾರದ ಕಾರ್ಯಸೂಚಿ ಸ್ಫೂರ್ತಿದಾಯಕ. ಮಹಿಳಾ ಮೀಸಲಾತಿ ವಾಸ್ತವವಾಗಿ ಜಾರಿಗೆ ಬರುವ ದಿನ ದಿಗಿಲು ಉಂಟಾಗುತ್ತದೆ" ಎಂದು 2014ರ ಜೂನ್‍ನಲ್ಲಿ ಅಂದರೆ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅವರು ಟ್ವೀಟ್ ಮಾಡಿದ್ದರು.

ತೇಜಸ್ವಿ ಸೂರ್ಯ ಬಗ್ಗೆ ಮಾಧ್ಯಮ ಸಂಸ್ಥೆಗಳು ಮಾಹಿತಿ ಕಲೆ ಹಾಕಲು ಆರಂಭಿಸಿದಾಗ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಯಿತು. ಇದೇ ಅಭಿಪ್ರಾಯ ಈಗಲೂ ಇದೆಯೇ ಎಂದು ಕೆಲವರು ಕೆಣಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News