ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಯ ಹಸ್ತಕ್ಷೇಪ: ಸರಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನೋಟಿಸ್

Update: 2019-03-26 16:55 GMT

ಬೆಂಗಳೂರು, ಮಾ.26: ಪೊಲೀಸ್ ಇಲಾಖೆಯಲ್ಲಿ ಪೊಲೀಸರ ಹಾಗೂ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸ್ಸು ಪತ್ರ ನೀಡುತ್ತಿರುವ ಸಚಿವರು, ಸಂಸದರು, ಶಾಸಕರ ವಿರುದ್ಧ ಎಸ್‌ಐಟಿ ತನಿಖೆಗೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಬೋರ್ಡ್, ಗೃಹ ಇಲಾಖೆಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ.ಶಶಿಧರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎನ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರ ವಿ.ಶಶಿಧರ್ ಪರ ವಾದಿಸಿದ ಹಿರಿಯ ವಕೀಲ ಜಿ.ಆರ್.ಮೋಹನ್ ಅವರು, ಪೊಲೀಸ್, ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಹಾಲಿ ಸಚಿವರಾಗಲಿ, ಶಾಸಕರಾಗಲಿ ಯಾವುದೇ ಕಾರಣಕ್ಕೂ ಶಿಫಾರಸ್ಸು ಪತ್ರಗಳನ್ನು ನೀಡಬಾರದೆಂದು ಸುಪ್ರೀಂಕೋರ್ಟ್ ಆದೇಶವಿದೆ. ಆದರೂ ರಾಜ್ಯದ ಜನಪ್ರತಿನಿಧಿಗಳು ಪೊಲೀಸರ ವರ್ಗಾವಣೆಗೆ ಶಿಫಾರಸ್ಸು ಮಾಡುತ್ತಿದ್ದಾರೆ. ಹೀಗಾಗಿ, ಈ ಎಲ್ಲ ಜನಪ್ರತಿನಿಧಿಗಳ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಎಸ್‌ಐಟಿಯಿಂದ ತನಿಖೆ ನಡೆಸಲು ನಿರ್ದೇಶನ ನೀಡಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ರಾಜ್ಯದಲ್ಲಿ ಪೊಲೀಸ್ ಬೋರ್ಡ್ ಸ್ಥಾಪನೆಯಾಗಿದ್ದು, ಪೊಲೀಸರೂ ಈ ಬೋರ್ಡ್ ಮುಖಾಂತರವೇ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ, ಜನಪ್ರತಿನಿಧಿಗಳು ಪೊಲೀಸರ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿ ಸುಪ್ರೀಂಕೋರ್ಟ್‌ನ ಆದೇಶ ಹಾಗೂ ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅಲ್ಲದೆ, ಅರ್ಜಿದಾರರ ಪರ ವಕೀಲರು, ನಾಲ್ಕನೆ ಪ್ರತಿವಾದಿಯನ್ನಾಗಿ ಮಾಡಲಾಗಿರುವ ವಿಧಾನಸಭೆ ಸ್ಪೀಕರ್ ಅವರನ್ನು ಅರ್ಜಿಯಿಂದ ಕೈಬಿಡಬೇಕೆಂದು ನ್ಯಾಯಪೀಠಕ್ಕೆ ಮೊಮೊ ಅನ್ನು ಸಲ್ಲಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಧಾನಸಭೆ ಸ್ಪೀಕರ್ ಅವರನ್ನು ಹೊರತುಪಡಿಸಿ ಉಳಿದ ಮೂವರು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News