ವಕೀಲೆ ಧರಣಿ ಆತ್ಮಹತ್ಯೆ ಪ್ರಕರಣ: ಸುರೇಶ್ ಸೇರಿ ಎಲ್ಲ ಆರೋಪಿಗಳು ಪೊಲೀಸ್ ವಶಕ್ಕೆ- ಹೈಕೋರ್ಟ್‌ಗೆ ಹೇಳಿಕೆ

Update: 2019-03-26 16:58 GMT

ಬೆಂಗಳೂರು, ಮಾ.26: ನಗರದ ಯುವ ವಕೀಲೆ ಎಸ್.ಧರಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ನಾರಾಯಣಪುರದ ಬಿಬಿಎಂಪಿ ಸದಸ್ಯ ವಿ.ಸುರೇಶ್ ಸೇರಿದಂತೆ ಎಲ್ಲ ಆರೋಪಿಗಳನ್ನೂ ಬಂಧಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎನ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ರಾಜ್ಯ ಸರಕಾರದ ಪರ ವಕೀಲರು, ವಕೀಲೆ ಎಸ್.ಧರಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸದಸ್ಯ ವಿ.ಸುರೇಶ್ ಸೇರಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಇನ್ನೂ ಮೂವರು ಆರೋಪಿಗಳ ವಿರುದ್ಧ ಯಾವುದೇ ಸೂಕ್ತ ಸಾಕ್ಷಾಧಾರಗಳು ಲಭ್ಯವಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ನ್ಯಾಯಪೀಠವು ಪ್ರತಿಕ್ರಿಯಿಸಿ, ವಕೀಲೆ ಧರಣಿ ಅವರ ಪೋಷಕರಿಗೆ ಸಂಬಂಧಪಟ್ಟ ಇಲಾಖೆಯವರು ಪರಿಹಾರ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.

ಪ್ರಕರಣವೇನು: ವಕೀಲೆ ಧರಣಿ ಅವರು 2018ರ ಡಿ.31ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹದೇವಪುರ ಠಾಣೆಯ ಪೊಲೀಸು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News