ಅಮೆರಿಕ ಗಡಿ ಗೋಡೆಗೆ ಪೆಂಟಗನ್‌ನಿಂದ ಬಿಲಿಯ ಡಾಲರ್

Update: 2019-03-26 17:32 GMT

ವಾಶಿಂಗ್ಟನ್, ಮಾ. 26: ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟ್ಟಲು ಉದ್ದೇಶಿಸಿರುವ ಗೋಡೆಯ ಒಂದು ಭಾಗದ ನಿರ್ಮಾಣಕ್ಕಾಗಿ ಒಂದು ಬಿಲಿಯ ಡಾಲರ್ (ಸುಮಾರು 6,889 ಕೋಟಿ ರೂಪಾಯಿ) ಖರ್ಚು ಮಾಡಲು ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್)ಯ ಉಸ್ತುವಾರಿ ಮುಖ್ಯಸ್ಥ ಪ್ಯಾಟ್ರಿಕ್ ಶ್ಯಾನಹನ್ ಸೋಮವಾರ ಅನುಮೋದನೆ ನೀಡಿದ್ದಾರೆ.

18 ಅಡಿ ಎತ್ತರದ 92 ಕಿಲೋಮೀಟರ್ ಗೋಡೆಯನ್ನು ಕಟ್ಟಲು ಹಾಗೂ ರಸ್ತೆಗಳನ್ನು ನಿರ್ಮಿಸಲು ಮತ್ತು ಮೇಲ್ದರ್ಜೆಗೇರಿಸಲು ಹಾಗೂ ಬೀದಿ ದೀಪದ ವ್ಯವಸ್ಥೆ ಮಾಡಲು ಆಂತರಿಕ ಭದ್ರತೆ ಇಲಾಖೆಯು ರಕ್ಷಣಾ ಇಲಾಖೆಯನ್ನು ಕೋರಿದೆ.

ಆಂತರಿಕ ಭದ್ರತೆ ಹಾಗೂ ಸುಂಕ ಮತ್ತು ಗಡಿ ಗಸ್ತಿಗೆ ಪೂರಕವಾಗಿ 1 ಬಿಲಿಯ ಡಾಲರ್‌ವರೆಗಿನ ಮೊತ್ತವನ್ನು ಖರ್ಚು ಮಾಡಲು ಆರ್ಮಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ನ ಕಮಾಂಡರ್‌ಗೆ ಶ್ಯಾನಹನ್ ಅಧಿಕಾರ ನೀಡಿದ್ದಾರೆ ಎಂದು ಪೆಂಟಗನ್ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ತನ್ನ ಈ ನಿರ್ಧಾರಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎಂದು ಉಸ್ತುವಾರಿ ರಕ್ಷಣಾ ಕಾರ್ಯದರ್ಶಿ ಹೇಳಿದ್ದಾರೆ. ಅಂತರ್‌ರಾಷ್ಟ್ರೀಯ ಗಡಿಗಳಲ್ಲಿರುವ ಮಾದಕ ದ್ರವ್ಯ ಕಳ್ಳಸಾಗಣೆ ಕಾರಿಡಾರ್‌ಗಳನ್ನು ತಡೆಯುವುದಕ್ಕಾಗಿ ಗಡಿಯ ಉದ್ದಕ್ಕೂ ರಸ್ತೆ ಮತ್ತು ತಡೆಬೇಲಿಗಳನ್ನು ನಿರ್ಮಿಸಲು ಹಾಗೂ ಬೀದಿ ದೀಪ ಅಳವಡಿಸಲು ಈ ಕಾನೂನು ಅವಕಾಶ ಮಾಡಿಕೊಡುತ್ತದೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News