ಇಸ್ರೇಲ್‌ನಿಂದ ಗಾಝಾದ ಮೇಲೆ ಸರಣಿ ವಾಯು ದಾಳಿ

Update: 2019-03-26 17:41 GMT

ಜೆರುಸಲೇಮ್, ಮಾ. 26: ಇಸ್ರೇಲ್ ಸೇನೆ ಮಂಗಳವಾರ, ಹಮಾಸ್ ಸಂಘಟನೆಯ ಪರಮೋಚ್ಛ ನಾಯಕನ ಕಚೇರಿಗಳು ಸೇರಿದಂತೆ ಗಾಝಾ ಪಟ್ಟಿಯ ಆಚೆಗಿರುವ ಹಲವಾರು ನೆಲೆಗಳನ್ನು ಗುರಿಯಾಗಿಸಿ ದಿನವಿಡೀ ದಾಳಿಗಳನ್ನು ನಡೆಸಿದೆ ಹಾಗೂ ಫೆಲೆಸ್ತೀನ್ ಕಡೆಯಿಂದ ಹೆಚ್ಚಿನ ದಾಳಿಗಳು ನಡೆಯಬಹುದು ಎಂದು ನಿರೀಕ್ಷಿಸಿ ತನ್ನ ಸೇನೆ ಮತ್ತು ರಾಕೆಟ್ ರಕ್ಷಣಾ ವ್ಯವಸ್ಥೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ.

ರವಿವಾರ ಫೆಲೆಸ್ತೀನ್ ಕಡೆಯಿಂದ ಹಾರಿದ ರಾಕೆಟೊಂದು ಇಸ್ರೇಲ್‌ನ ಮನೆಯೊಂದರ ಮೇಲೆ ಅಪ್ಪಳಿಸಿದ ಘಟನೆಯ ಬಳಿಕ ಈ ಬೆಳವಣಿಗೆಗಳು ಸಂಭವಿಸಿವೆ. ಆ ದಾಳಿಯಲ್ಲಿ ಒಂದೇ ಕುಟುಂಬದ ಏಳು ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲ್‌ನ ಹೆಚ್ಚಿನ ನಗರಗಳಲ್ಲಿರುವ ಸಾರ್ವಜನಿಕ ಬಾಂಬ್ ಆಶ್ರಯ ಸ್ಥಾನಗಳನ್ನು ತೆರೆಯಲಾಗಿದೆ ಹಾಗೂ ಅಧಿಕಾರಿಗಳು ದಕ್ಷಿಣ ಇಸ್ರೇಲ್‌ನಲ್ಲಿನ ಕ್ರೀಡಾ ಚಟುವಟಿಕೆಗಳು ಮತ್ತು ಸಾರ್ವಜನಿಕ ಸಾರಿಗೆಯನ್ನು ರದ್ದುಪಡಿಸಿದ್ದಾರೆ.

ಸೋಮವಾರ ಕನಿಷ್ಠ 30 ರಾಕೆಟ್‌ಗಳನ್ನು ಇಸ್ರೇಲ್‌ನತ್ತ ಹಾರಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಸೋಮವಾರ ತಡ ರಾತ್ರಿ ದಕ್ಷಿಣ ಇಸ್ರೇಲ್‌ನಾದ್ಯಂತ ವಾಯು ದಾಳಿ ಸೈರನ್‌ಗಳು ಮೊಳಗಿದವು.

ರಾಕೆಟ್ ದಾಳಿಗಳಿಗೆ ಪ್ರತಿಯಾಗಿ 15 ವಾಯು ದಾಳಿಗಳನ್ನು ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಈ ದಾಳಿಗಳಲ್ಲಿ, ಹಮಾಸ್ ಮತ್ತು ಇತರ ಗುಂಪುಗಳ ಸೇನಾ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News