ದೇಶದ ಪ್ರಥಮ ಡಿಜಿಟಲ್ ಫಲಕದ ಉದ್ಯಾನವನ 'ಕಬ್ಬನ್ ಪಾರ್ಕ್'

Update: 2019-03-26 18:17 GMT

ಬೆಂಗಳೂರು, ಮಾ.26: ಕಬ್ಬನ್ ಉದ್ಯಾನವನದಲ್ಲಿ 50 ಡಿಜಿಟಲ್ ಫಲಕಗಳ ಹಾಗೂ 750 ಸ್ಮಾರ್ಟ್ ಲೈಟ್‌ಗಳನ್ನು ಬೆಸ್ಕಾಂ ಅಳವಡಿಸುತ್ತಿದ್ದು, ಇದು ಸಾಧ್ಯವಾದರೆ ಅತ್ಯಾಧುನಿಕ ವಿದ್ಯುತ್ ಆಧಾರಿತ ಡಿಜಿಟಲ್ ಫಲಕಗಳನ್ನು ಅಳವಡಿಸಿರುವ ದೇಶದ ಪ್ರಥಮ ಉದ್ಯಾನವನ ಎಂಬ ಖ್ಯಾತಿಯನ್ನು ಕಬ್ಬನ್ ಉದ್ಯಾನವನ ಗಳಿಸಲಿದೆ.

ಇದಕ್ಕಾಗಿ ಇಲಾಖೆಯ ಉಪನಿರ್ದೇಶಕ ಮಹಾಂತೇಶ್ ಮುರಗೋಡ್ ಅವರು ಬರೋಬ್ಬರಿ ಎರಡು ವರ್ಷಗಳ ಕಾಲ ನಿರಂತರವಾಗಿ ಬೆಂಬಿಡದೆ ಮನವಿ ಪತ್ರಗಳನ್ನು ಬರೆದು, ದೂರವಾಣಿ ಕರೆಗಳ ಮೂಫಲಕ ಬೆಸ್ಕಾಂನಿಂದ ಕಬ್ಬನ್ ಉದ್ಯಾನಕ್ಕೆ ಒಂದು ಮಹತ್ತರ ಕಾರ್ಯವನ್ನು ಮಾಡಿಸಿದ್ದಾರೆ.

ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಪರಿಸರ ಪೂರಕ ಯೋಜನೆಗಳಾದ್ದರಿಂದ ಉದ್ಯಾನಕ್ಕೂ ಅನುಕೂಲ, ಡಿಜಿಟಲ್ ಫಲಕಗಳನ್ನು ಪ್ರಸಾರವಾಗುವ ಮಾಹಿತಿಯಿಂದ ಹತ್ತಾರು ಜನ ಜಾಗೃತರಾಗುವುದರ ಜತೆಗೆ ಉಷ್ಣತೆ, ತೇವಾಂಶ, ವಾಯು ಮಾಲಿನ್ಯ ಇತ್ಯಾದಿಗಳ ಪ್ರಮಾಣವನ್ನು ತಿಳಿದು ಅದಕ್ಕೆ ತಕ್ಕಂತೆ ಆರೋಗ್ಯದ ಬಗೆಗೂ ಎಚ್ಚರ ವಹಿಸಬಹುದು.

ಸಾರ್ವಜನಿಕರಿಗೆ ಈ ಫಲಕಗಳು ಪರಿಸರ ಕುರಿತಾದ ಅತ್ಯುತ್ತಮ ಸಂದೇಶಗಳನ್ನು ಪ್ರಸರಿಸಲಿವೆ. ಕಬ್ಬನ್ ಉದ್ಯಾನದ ರಸ್ತೆಯಂಚುಗಳಲ್ಲಿ ಈ ಡಿಜಿಟಲ್ ಫಲಕಗಳು ರಾರಾಜಿಸಲಿವೆ. ಇದರ ಜತೆಗೆ ಉದ್ಯಾನದಾದ್ಯಂತ 750 ಸ್ಮಾರ್ಟ್ ಲೈಟ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಲೈಟ್‌ಗಳು ಕತ್ತಲಲ್ಲಿ ತುಸು ಮಬ್ಬಾದಂತೆ ಇರುತ್ತವೆ. ಆದರೆ ಈ ಲೈಟ್‌ಗಳ ಕೆಳಗಡೆ ಜನರು ಆಗಮಿಸುತ್ತಿದ್ದಂತೆಯೇ ಪ್ರಖರ ಬೆಳಕು ಹೊಮ್ಮಿಸುತ್ತದೆ. ನಂತರ ಮಬ್ಬಾಗುತ್ತವೆ. ಇದರಿಂದ ಉದ್ಯಾನದ ಪರಿಸರಕ್ಕೂ ಪೂರಕವಾಗಿರುತ್ತವೆ.

ಫಲಕಗಳ ವಿಶೇಷತೆ: ಅಂದ ಹಾಗೆ ಈ ಡಿಜಿಟಲ್ ಫಲಕಗಳು ಕಬ್ಬನ್ ಉದ್ಯಾನದ ಲ್ಲಿರುವ ಉಷ್ಣಾಂಶದ ಪ್ರಮಾಣ, ತೇವಾಂಶದ ಪ್ರಮಾಣ, ಮಾಲಿನ್ಯ ಪ್ರಮಾಣ ಎಷ್ಟಿದೆ, ತೋಟಗಾರಿಕೆ ಇಲಾಖೆ ಆಯೋಜಿಸಲಿರುವ ಕಾರ್ಯಕ್ರಮಗಳ ವಿವರ, ಲಪುಷ್ಪ ಪ್ರದರ್ಶನದ ಸಂದರ್ಭದಲ್ಲಿ ಅದರ ಮಾಹಿತಿ ವಿವರಗಳನ್ನು ಕೂಡ ಈ ಫಲಕಗಳು ಬಿತ್ತರಿಸಲಿವೆ. ಹೆಚ್ಚು ಹೊಗೆ ಬಿಡಬೇಡಿ, ವಿನಾಕಾರಣ ಜೋರಾಗಿ ಹಾರ್ನ್ ಮಾಡಬೇಡಿ ಎಂಬ ಬಗೆಗೂ ಮಾಹಿತಿಯನ್ನು ಬಿತ್ತರಿಸಲಿವೆ. 2 ಅಡಿ ಉದ್ದ ಹಾಗೂ 1 ಅಡಿ ಅಗಲದ ಕಪ್ಪು ಬಣ್ಣದ ಫಲಕಗಳಲ್ಲಿ ಹಸಿರು ಬಣ್ಣದ ಅಕ್ಷರಗಳು ಮೂಡಿಬರಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News