ಗಣಿ ಉದ್ಯಮ ಮರು ಆರಂಭಕ್ಕೆ ಆಗ್ರಹಿಸಿ ಬೃಹತ್ ಧರಣಿ

Update: 2019-03-26 18:20 GMT

ಬೆಂಗಳೂರು, ಮಾ.26: ರಾಜ್ಯದಲ್ಲಿ ಸ್ಥಗಿತಗೊಳಿಸಿರುವ ಕಬ್ಬಿಣದ ಅದಿರು ಗಣಿ ಉದ್ಯಮವನ್ನು ಪುನರಾರಂಭಿಸುವ ಮೂಲಕ ಗಣಿ ಉದ್ಯಮ ಅವಲಂಬಿಸಿದ್ದ 2 ಲಕ್ಷ ಜನರಿಗೆ ಪುನರ್ ಉದ್ಯೋಗ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ಗಣಿ ಅವಲಂಬಿತರ ವೇದಿಕೆ ಬೃಹತ್ ಧರಣಿ ನಡೆಸಿತು.

ಮಂಗಳವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಕೊಪ್ಪಳ, ಬಳ್ಳಾರಿ, ಹಾಗೂ ಚಿತ್ರದುರ್ಗ ಸೇರಿದಂತೆ ಸುತ್ತಮುತ್ತಲಿನ ಕಬ್ಬಿಣದ ಅದಿರು ಗಣಿ ಉದ್ಯಮದಲ್ಲಿ ಕಾರ್ಯ ನಿರ್ವಸುತ್ತಿದ್ದ ನೂರಾರು ಉದ್ಯಮಿಗಳು ಧರಣಿ ನಡೆಸುವ ಮೂಲಕ ಗಣಿ ಉದ್ಯಮ ಆರಂಭಕ್ಕೆ ಸರಕಾರ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು. ಧರಣಿಯನ್ನುದ್ದೇಶಿಸಿ ಮಾತನಾಡಿದ ವೇದಿಕೆ ವಕ್ತಾರ ರಾಜ್‌ಕುಮಾರ್, ರಾಜ್ಯದಲ್ಲಿ ಗಣಿಗಾರಿಕೆ ನಿಷೇಧದ ನಂತರ ಗಣಿ ಉದ್ಯಮ ಅವಲಂಬಿಸಿದ ಲಕ್ಷಾಂತರ ಕಾರ್ಮಿಕರು, ಚಾಲಕರು, ಸಣ್ಣ ಪ್ರಮಾಣದ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಅತ್ಯಧಿಕ ಪ್ರಮಾಣ ಉದ್ಯೋಗಕ್ಕೆ ಹಾನಿಯಾಗಿದೆ. ಸುಪ್ರೀಂ ಕೋರ್ಟ್ ಗಣಿಗಾರಿಕೆ ಪುನರಾರಂಭಕ್ಕೆ ಅನುಮತಿ ನೀಡಿದ ನಂತರವು ರಾಜ್ಯ ಸರಕಾರ ಗಣಿಗಾರಿಕೆ ಆರಂಭಿಸಿಲ್ಲ ಎಂದು ಆರೋಪಿಸಿದರು.

ಕರ್ನಾಟಕ ಗಣಿ ವಲಯ ನೀತಿ ಪಕ್ಷಪಾತದಿಂದ ಕೂಡಿದೆ. ಉಕ್ಕು ಕೈಗಾರಿಕೆ ಖರೀದಿ ರೀತಿನೀತಿಗಳಲ್ಲಿ ಹಾಗೂ ಉತ್ಪಾದನೆ ಮತ್ತು ಸಾಗಾಣಿಕೆಯಲ್ಲಿ ಬದಲಾವಣೆ ಯಾಗುತ್ತಿದೆ. ಖರೀದಿದಾರರು ಹೊರರಾಜ್ಯಗಳಿಂದ ಮುಕ್ತವಾಗಿ ಕಬ್ಬಿಣದ ಅದಿರು ಕರಗಿಸಬಹುದಾಗಿದೆ. ಇದೇ ಸ್ಥಳೀಯ ಅದಿರು ಮಾರಾಟಗಾರರ ಸಂಕಷ್ಟಕ್ಕೆ ಕಾರಣವಾಗಿದೆ. ಈ ನೀತಿಯಿಂದಲೇ ರಾಜ್ಯದಲ್ಲಿ ಮಾರಾಟವಾಗದೆ ಅಪಾರ ಪ್ರಮಾಣದ ಅದಿರು ಉಳಿದಿದೆ ಎಂದರು.

ನಿಶ್ಚಿತ ಆದಾಯ ಮೂಲವಿಲ್ಲದ ಉದ್ಯೋಗಸ್ಥರು ಸಂಕಷ್ಟದಲ್ಲಿದ್ದಾರೆ. ಗಣಿ ಉದ್ಯಮ ನಡೆಯುತ್ತಿರುವ ಬಹುತೇಕ ಪ್ರದೇಶಗಳು ಬರಗಾಲ ಪೀಡಿತ ಪ್ರದೇಶಗಳಾಗಿವೆ. ಈ ಪ್ರದೇಶದಲ್ಲಿ ಶೇ.25 ರಷ್ಟು ವ್ಯವಸಾಯ ಹೊರತುಪಡಿಸಿದರೆ ಉಳಿದ ಶೇ.75 ರಷ್ಟು ಭಾಗ ಜೀವನಕ್ಕಾಗಿ ಗಣಿಗಳನ್ನು ಅವಲಂಬಿಸಿದ್ದಾರೆ ಎಂದು ತಿಳಿಸಿದರು.

ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಬ್ಬಿಣದ ಅದಿರು ಮುಕ್ತ ಮಾರಾಟಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಅದಿರು ಆಮದಿಗಿಂತ ಮಾರಾಟಕ್ಕೆ ಹೆಚ್ಚು ಗಮನಹರಿಸಬೇಕು. ಗಣಿ ಉದ್ಯಮದಲ್ಲಿರುವ ತಾರತಮ್ಯಗಳ ನೀತಿಗಳನ್ನು ನಿಷೇಧಿಸಿ, ರಾಜ್ಯದಲ್ಲಿ ಗಣಿ ಉದ್ಯಮ ಪುನರಾರಂಭಕ್ಕೆ ಸರಕಾರ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.

ಕಬ್ಬಿಣದ ಅದಿರಿನ ಖರೀದಿದಾರರು ರಾಜ್ಯದ ಹೊರಗಿನಿಂದ ಮುಕ್ತವಾಗಿ ಖರೀದಿಸಲು ಅನುಮತಿ ಇದೆ. ಆದರೆ, ಮಾರಾಟಗಾರರಿಗೆ ಮುಕ್ತ ಮಾರಾಟಕ್ಕೆ ಅವಕಾಶ ನೀಡದ ಕಾರಣ ಮಾರಾಟವಾಗದ ದಾಸ್ತಾನು ಸಂಗ್ರಹವಾಗಿದೆ. ಇದರಿಂದಾಗಿ ನಮಗೆಲ್ಲ ಉದ್ಯೋಗವಿಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೇಡಿಕೆಗಳು

* ಅದಿರು ಮುಕ್ತ ವ್ಯಾಪಾರಕ್ಕೆ ಅನುಮತಿ ನೀಡಬೇಕು.

* ಆಮದುಗಳ ಬದಲಿಗೆ ಸ್ಥಳೀಯ ಕಬ್ಬಿಣದ ಅದಿರುಗಳಿಗೆ ಆದ್ಯತೆ ನೀಡಬೇಕು.

* ಟ್ರಕ್ಕರ್ಸ್ ಮತ್ತು ಇತರೆ ಲಕ್ಷಗಟ್ಟಲೆ ಗಣಿಗಾರಿಕೆ ಅವಲಂಬಿತರಿಗೆ ನಿಯಮಿತ ವ್ಯವಹಾರ ಖಚಿತಪಡಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News