ಸಹಕಾರ ಕ್ಷೇತ್ರದ ಭ್ರಷ್ಟಾಚಾರ ಹೋಗಲಾಡಿಸುವ ಕೃತಿಗಳು ಹೆಚ್ಚೆಚ್ಚು ಬರಲಿ: ನ್ಯಾ.ಎಲ್.ನಾರಾಯಣಸ್ವಾಮಿ

Update: 2019-03-27 18:58 GMT

ಬೆಂಗಳೂರು, ಮಾ.27: ಇಂದು ದೇಶದ ಪ್ರತಿ ಗ್ರಾಮದಲ್ಲೂ ಸಹಕಾರ ಸಂಘ ಹಾಗೂ ಸಹಕಾರ ಬ್ಯಾಂಕ್‌ಗಳಿವೆ. ನಮ್ಮ ವಕೀಲರು ಬರೆದಿರುವ ಕೃತಿಯೂ ಸಹಕಾರ ಕ್ಷೇತ್ರದಲ್ಲಿ ಇರುವವರು ಸೇರಿ ಎಲ್ಲರಿಗೂ ಅನುಕೂಲವಾಗಲಿದೆ. ಇಂತಹ ಕೃತಿಗಳು ಹೆಚ್ಚೆಚ್ಚು ಬರಲಿ ಎಂದು ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹೇಳಿದ್ದಾರೆ. 

ಬುಧವಾರ ಹೈಕೋರ್ಟ್ ಸಭಾಂಗಣ-2ರಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ವಕೀಲ ಡಿ.ಆರ್.ರವಿಶಂಕರ್ ರಚಿಸಿರುವ ‘ಕರ್ನಾಟಕ ಕೋ-ಆಪರೇಟಿವ್ ಸೊಸೈಟಿ ಮಾನ್ಯುಯಲ್’ ಕೈಪಿಡಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಎಲೆಕ್ಟ್ರಾನಿಕ್ ವಸ್ತುಗಳು ಬಂದ ಮೇಲೆ ನಾವು ನ್ಯಾಯಾಲಯದ ಆದೇಶಗಳನ್ನು ಮೊಬೈಲ್‌ನಲ್ಲಿಯೆ ಓದಿ, ಮೊಬೈಲ್‌ನಲ್ಲಿಯೆ ಪಾಯಿಂಟ್ಸ್‌ಗಳನ್ನು ಮಾಡಿಕೊಳ್ಳುತ್ತೇವೆ. ಆದರೆ, ವಕೀಲ ಡಿ.ಆರ್.ರವಿಶಂಕರ್ ಅವರು ಸಹಕಾರ ಸಂಘ ಸೇರಿ ಇನ್ನಿತರ ಸಹಕಾರ ಸಂಸ್ಥೆಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಲಿ ಎಂಬ ಉದ್ದೇಶದಿಂದ ಕರ್ನಾಟಕ ಕೋ-ಆಪರೇಟಿವ್ ಸೊಸೈಟಿ ಮಾನ್ಯುಯಲ್ ಎಂಬ ಕೃತಿಯನ್ನು ರಚಿಸಿದ್ದಾರೆ ಎಂದು ಹೇಳಿದರು.

ಶತಮಾನಗಳ ಹಿಂದೆಯೆ ಬುದ್ಧ ಸಹಕಾರ ಎಂಬ ಪದಗಳನ್ನು ಬಳಸಿ ಅದನ್ನು ಜಾರಿಗೆ ತರಲು ಯತ್ನಿಸಿದ್ದನು. ಆದರೆ, ಇಂದು ಸಹಕಾರದ ಯುಗವೆ ಪ್ರಾರಂಭವಾಗಿದ್ದು, ಇಂತಹ ಕೃತಿಗಳು ಯಥೇಚ್ಛವಾಗಿ ಮೂಡಿಬರಲಿ ಎಂದು ಆಶಯ ವ್ಯಕ್ತಪಡಿಸಿದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಶೇ.80ರಷ್ಟು ಭ್ರಷ್ಟಾಚಾರವಿದ್ದು, ಈ ಭ್ರಷ್ಟಾಚಾರವನ್ನು ತೊಡೆದು ಹಾಕಲು ಕರ್ನಾಟಕ ಕೋ-ಆಪರೇಟಿವ್‌ಸೊಸೈಟಿ ಮಾನ್ಯುಯಲ್ ಕೃತಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರವಿದೆ. ಆದರೆ, ಆ ಭ್ರಷ್ಟಾಚಾರದ ಅಂಶ ಸಹಕಾರ ಕ್ಷೇತ್ರದಲ್ಲಿ ಹೆಚ್ಚಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ, ಜಂಟಿ ಕಾರ್ಯದರ್ಶಿ ಡಿ.ಸಿ.ಪರಮೇಶ್ವರಯ್ಯ, ಉಪಾಧ್ಯಕ್ಷೆ ಎಚ್.ಆರ್.ಅನಿತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News