ಸಚಿವ ಸಿ.ಎಸ್.ಪುಟ್ಟರಾಜು ನಿವಾಸ ಸಹಿತ ರಾಜ್ಯದ 15 ಕಡೆ ಐಟಿ ದಾಳಿ

Update: 2019-03-28 05:59 GMT

ಬೆಂಗಳೂರು, ಮಾ.28: ನಿನ್ನೆ ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘‘ನನ್ನ ಮೇಲೆ ಐಟಿ ದಾಳಿಗೆ ಅಧಿಕಾರಿಗಳು ರೆಡಿಯಾಗಿದ್ದಾರೆ’’ ಅನ್ನುವ ಹೇಳಿಕೆ ನೀಡಿರುವ ಬೆನ್ನಲ್ಲೇ ಇಂದು ಬೆಳ್ಳಂಬೆಳಗ್ಗೆ ಮಂಡ್ಯ, ಹಾಸನ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಿಎಂ ಆಪ್ತರ ನಿವಾಸ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಆಪ್ತರಾಗಿರುವ ಸಣ್ಣ ನೀರಾವರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಮಂಡ್ಯ ಮತ್ತು ಮೈಸೂರು ನಗರದಲ್ಲಿರುವ ನಿವಾಸಗಳ ಮೇಲೆ ಇಂದು ಮುಂಜಾವ 5:30ರ ಸುಮಾರಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೆಡಿಎಸ್ ವಿಧಾನ ಪರಿಷತ್ ಸದಸ್ಯ, ಉದ್ಯಮಿ ಬಿ.ಎಂ.ಫಾರೂಕ್ ಅವರ ಬೆಂಗಳೂರಿನ ನಿವಾಸದ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರುಳಿ ಗ್ರಾಮದಲ್ಲಿರುವ ಸಚಿವ ಸಿ.ಎಸ್.ಪುಟ್ಟರಾಜು ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೊತೆಗೆ ಪುಟ್ಟರಾಜು ಅವರ ಬಹುಪಾಲು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಅದೇ ಗ್ರಾಮದಲ್ಲಿರುವ ಅವರ ಅಣ್ಣನ ಮಗ, ಜಿಲ್ಲಾ ಪಂಚಾಯತ್ ಸದಸ್ಯ ಸಿ.ಅಶೋಕ್ ಮನೆ, ಮೈಸೂರಿನ ವಿಜಯನಗರದಲ್ಲಿರುವ ಇನ್ನೊಂದು ಮನೆ ಮೇಲೆ ಕೂಡ ಐಟಿ ದಾಳಿ ನಡೆದಿದೆ. ದಾಳಿ ವೇಳೆ ಸಿಕ್ಕ ಕಡತಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇದಲ್ಲದೆ ಹಲವು ಉದ್ಯಮಿಗಳ ಮನೆಗಳನ್ನು ಕೇಂದ್ರೀಕರಿಸಿ ಇಂದು ಮುಂಜಾವ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ.
ಪಾಪ್‌ಕಾರ್ನ್ ವ್ಯಾಪಾರ ಮಾಡುತ್ತಿರುವ ಉದ್ಯಮಿ ಸಿದ್ದೀಕ್ ಸೇಠ್ ಅವರ ಜಯ ನಗರ ಸೌಂತ್ ಎಂಡ್ ಸರ್ಕಲ್ ಬಳಿಯಿರುವ ನಿವಾಸಕ್ಕೆ ನಾಲ್ಕು ವಾಹನಗಳಲ್ಲಿ ಬಂದಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ನಗರದ ಎಚ್.ಎಸ್.ಆರ್. ಲೇಔಟ್ ಜಯನಗರ, ಬಸವನಗುಡಿ, ಸೌತ್ ಎಂಡ್ ಸರ್ಕಲ್ ಸೇರಿದಂತೆ ಹಲವೆಡೆ ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿ ತೆರಿಗೆ ವಂಚನೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಈ ನಡುವೆ ಐಟಿ ದಾಳಿಯನ್ನು ವಿರೋಧಿಸಿ ಪುಟ್ಟರಾಜು ಬೆಂಬಲಿಗರು ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News