ಭಾರತದ ಉಪಗ್ರಹ ನಾಶಕ ಕ್ಷಿಪಣಿ ಪರೀಕ್ಷೆ: ಬಾಹ್ಯಾಕಾಶ ಅವಶೇಷಗಳ ಬಗ್ಗೆ ಅಮೆರಿಕ ಎಚ್ಚರಿಕೆ

Update: 2019-03-28 11:02 GMT

ಮಿಯಾಮಿ, ಮಾ.28: ಭಾರತ ಬುಧವಾರ ನಡೆಸಿದಂತಹ ಉಪಗ್ರಹ ನಾಶಕ ಕ್ಷಿಪಣಿ ಪರೀಕ್ಷೆಯನ್ನು ನಡೆಸಲು ಯೋಚಿಸುವ ದೇಶಗಳಿಗೆ ಎಚ್ಚರಿಕೆ ನೀಡಿರುವ ಅಮೆರಿಕಾದ ಹಂಗಾಮಿ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶನಾಹನ್,  ಇಂತಹ ಪರೀಕ್ಷೆಗಳಿಂದ ಉದ್ಭವವಾಗುವ ಅವಶೇಷಗಳು ಬಾಹ್ಯಾಕಾಶವನ್ನು ಅಸ್ತವ್ಯಸ್ತಗೊಳಿಸುವ ಅಪಾಯವಿದೆ ಎಂದಿದ್ದಾರೆ.

ಅಮೆರಿಕಾದ ಮಿಲಿಟರಿಯ ಸದರ್ನ್ ಕಮಾಂಡ್ ಗೆ ಭೇಟಿ ನೀಡಿದ ಸಂದರ್ಭ ಫ್ಲೋರಿಡಾದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಅವರು, ಭಾರತ ತನ್ನದೇ ಒಂದು ಉಪಗ್ರಹದ ಮೇಲೆ ಪ್ರಯೋಗಿಸಿದ ಉಪಗ್ರಹ ನಾಶಕ ಕ್ಷಿಪಣಿಯ ಪರಿಣಾಮವನ್ನು ಅಮೆರಿಕ ಇನ್ನೂ ಅಧ್ಯಯನ ನಡೆಸುತ್ತಿದೆ ಎಂದಿದ್ದಾರೆ.

“ನನ್ನ  ಸಂದೇಶ ಇಷ್ಟೇ : ನಾವು ಬಾಹ್ಯಾಕಾಶವನ್ನು ಅಸ್ತವ್ಯಸ್ತಗೊಳಿಸುವುದು ಬೇಡ.  ನಾವು ವ್ಯವಹಾರ ನಡೆಸುವ ಸ್ಥಳ ಅದಾಗಬೇಕು, ಜನರಿಗೆ ಕಾರ್ಯನಿರ್ವಹಿಸಲು ಸ್ವಾತಂತ್ರ್ಯವಿರುವ ಸ್ಥಳ ಅದಾಗಿರಬೇಕು,'' ಎಂದರು.

ಭಾರತದ ಉಪಗ್ರಹ ನಾಶಕ ಕ್ಷಿಪಣಿ ಪರೀಕ್ಷೆಯಿಂದ ಉದ್ಭವವಾಗಿರುವ 250ಕ್ಕೂ ಅಧಿಕ ಅವಶೇಷಗಳನ್ನು ಅಮೆರಿಕಾದ ಮಿಲಿಟರಿಯ ಸ್ಟ್ರ್ಯಾಟಜಿಕ್ ಕಮಾಂಡ್ ಗಮನಿಸುತ್ತಿದೆ.  ಅವುಗಳು  ಭೂಮಿಯ ವಾತಾವರಣಕ್ಕೆ ಪ್ರವೇಶಿಸುವ ತನಕ ಅವುಗಳ ಮೇಲೆ ನಿಗಾ ಇಡಬೇಕಿದೆ'' ಎಂದು ಪೆಂಟಗನ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಡೇವ್ ಈಸ್ಟ್ ಬರ್ನ್ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಅಮೆರಿಕಾದ ವಾಯುಪಡೆ ಸ್ಪೇಸ್ ಕಮಾಂಡ್  ಉಪ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡೇವಿಡ್ ಥಾಂಪ್ಸನ್ ತಿಳಿಸಿದ್ದಾರೆ. ನಾವು ಬಾಹ್ಯಾಕಾಶವನ್ನು ಹಾಳುಗೆಡಹಿದರೆ ಮತ್ತೆ ಅದು ನಮಗೆ ದೊರೆಯದು ಎಂದು ಭಾರತವನ್ನು ಉಲ್ಲೇಖಿಸದೆ ನಾಸಾ ಮುಖ್ಯಸ್ಥ ಜಿಮ್ ಬ್ರಿಡೆನ್‍ ಸ್ಟೈನ್  ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News