ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ಕಡ್ಡಾಯ ಲೈಸನ್ಸ್ ಅವಶ್ಯಕತೆಯಿದೆ: ಹೈಕೋರ್ಟ್

Update: 2019-03-28 17:49 GMT

ಬೆಂಗಳೂರು, ಮಾ.28: ರಾಜ್ಯದಲ್ಲಿ ಅನಧಿಕೃತವಾಗಿ ನಡೆಯುವ ಭ್ರೂಣಹತ್ಯೆಗಳನ್ನು ತಡೆಗಟ್ಟಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಡಯಾಗ್ನೋಸ್ಟಿಕ್ ಸೆಂಟರ್‌ಗಳು ಕಡ್ಡಾಯ ಲೈಸನ್ಸ್ ಸೇರಿ ಹಲವು ಮಾರ್ಗಸೂಚಿಗಳನ್ನು ಪಾಲಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆ ಯನ್ನು ಮುಂದೂಡಿತು.

ಈ ಸಂಬಂಧ ಇಂಡಿ ತಾಲೂಕಿನ ಮಾಜಿ ಶಾಸಕ ಡಾ.ಸಾರ್ವಭೌಮ ಎಸ್. ಬಗಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರ ಡಾ.ಸಾರ್ವಭೌಮ ಎಸ್. ಬಗಲಿ ಪರ ವಾದಿಸಿದ ಹಿರಿಯ ವಕೀಲ ಜಿ.ಆರ್.ಮೋಹನ್ ಅವರು, ಮಗು ತಾಯಿಯ ಗರ್ಭದಲ್ಲಿಯಿದ್ದಾಗ ಮಗುವಿನ ಲಿಂಗದ ಬಗ್ಗೆ ಯಾವುದೆ ಮಾಹಿತಿಯನ್ನು ನೀಡುವಂತಿಲ್ಲ. ಹಾಗೊಂದು ಬಾರಿ ತಾಯಿಯ ಗರ್ಭದಿಂದ ಭ್ರೂಣವನ್ನು ಹೊರ ತೆಗೆಯಲೇಬೇಕೆಂದಾಗ ಸರಕಾರಿ ವೈದ್ಯರು ನೀಡುವ ಪ್ರಮಾಣ ಪತ್ರವನ್ನು ಪಡೆದ ಬಳಿಕವೆ ಭ್ರೂಣವನ್ನು ಹೊರ ತೆಗೆಯಲು ಅವಕಾಶವಿದೆ. ಆದರೆ, ಕೆಲ ಡಯಾಗ್ನೋಸ್ಟಿಕ್ ಸೆಂಟರ್‌ಗಳು(ತಪಾಸಣಾ ಕೇಂದ್ರ) ಕೇಂದ್ರ ಸರಕಾರ ಜಾರಿಗೆ ತಂದಿರುವ ಪ್ರಸವ ಪೂರ್ವ ಮತ್ತು ಪ್ರಸವಪೂರ್ವ ರೋಗ ನಿರ್ಣಯದ ತಂತ್ರ ಕಾಯ್ದೆ(ಪಿಸಿಪಿಎನ್‌ಡಿಟಿ) 1994 ಹಾಗೂ ಸುಪ್ರೀಂಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿ ಭ್ರೂಣದ ಲಿಂಗವನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿವೆ ಎಂದು ಪೀಠಕ್ಕೆ ತಿಳಿಸಿದರು.

ರಾಜ್ಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಈ ಸಮಸ್ಯೆಯನ್ನು ತಡೆಗಟ್ಟಲು ಕೇಂದ್ರ ಸರಕಾರ ಜಾರಿಗೆ ತಂದಿರುವ ಪಿಸಿಪಿಎನ್‌ಡಿಟಿ ಕಾಯ್ದೆ(1994) ಹಾಗೂ ಸುಪ್ರೀಂಕೋರ್ಟ್‌ನ ಆದೇಶವನ್ನು ಪಾಲಿಸಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯದಲ್ಲಿರುವ ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ಕಡ್ಡಾಯವಾಗಿ ಲೈಸೆನ್ಸ್ ಸೇರಿದಂತೆ ಇನ್ನಿತರ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆಯನ್ನು ಮುಂದೂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News