ಕೈಯಲ್ಲಿ ನಯಾಪೈಸೆಯಿಲ್ಲ, ಬ್ಯಾಂಕ್ ಬ್ಯಾಲೆನ್ಸ್ ಝೀರೊ: ದೇಶದ ಅತ್ಯಂತ ಬಡ ಅಭ್ಯರ್ಥಿ ಇವರೇ…

Update: 2019-04-01 10:21 GMT

ಮೀರತ್, ಎ.1: ಕೈಯಲ್ಲಿ ನಯಾಪೈಸೆ ಇಲ್ಲ, ಬ್ಯಾಂಕ್ ಬ್ಯಾಲೆನ್ಸ್ ಕೂಡಾ ಝೀರೊ. ಪತ್ನಿಯ ಖಾತೆಯೂ ಶೂನ್ಯ ಬ್ಯಾಲೆನ್ಸ್ ತೋರಿಸುತ್ತದೆ. ಇದು 51 ವರ್ಷ ವಯಸ್ಸಿನ ವಕೀಲ, ಮುಝಾಫರ್ ನಗರ ಕ್ಷೇತ್ರದ ಅಭ್ಯರ್ಥಿಯ ವಿಶೇಷ. ಬಹುಶಃ ಈ ಬಾರಿ ಲೋಕಸಭಾ ಚುನಾವಣೆ ಕಣದಲ್ಲಿರುವ ಅತ್ಯಂತ ಬಡ ಅಭ್ಯರ್ಥಿ ಇವರೇ.

ಮಂಗೇರಾಮ್ ಕಶ್ಯಪ್, ಮುಝಾಫರ್ ‍ನಗರ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡುವ ಇತರ ಕಪ್ಪುಕೋಟು ಧಾರಿಗಳಿಗಿಂತ ಭಿನ್ನ. 2000ದಿಂದೀಚೆ ನಡೆದ ಎಲ್ಲ ಚುನಾವಣೆಗಳಲ್ಲೂ ಇವರು ಸ್ಪರ್ಧಿಸಿದ್ದಾರೆ ಎನ್ನುವುದನ್ನು ಕೋರ್ಟ್ ಆವರಣದಲ್ಲಿ ಯಾರನ್ನೇ ಕೇಳಿದರೂ ಹೇಳುತ್ತಾರೆ. 2000ನೇ ಇಸ್ವಿಯಲ್ಲಿ ಸ್ಥಾಪನೆಯಾದ ಮಜ್ದೂರ್ ಕಿಸಾನ್ ಯೂನಿಯನ್ ಪಾರ್ಟಿಯ ಹುರಿಯಾಳು. ಈ ಪಕ್ಷ 1000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಬಹುತೇಕ ಎಲ್ಲರೂ ಕೂಲಿಕಾರ್ಮಿಕರು ಎಂದು ಮಂಗೇರಾಮ್ ಹೇಳುತ್ತಾರೆ.

ಇತ್ತೀಚೆಗೆ ನಾಮಪತ್ರದ ಜತೆ ಸಲ್ಲಿಸಿದ ಅಫಿದಾವಿತ್ ‍ನಲ್ಲಿ, ಯಾವುದೇ ಆಭರಣ ಅಥವಾ ನಗದನ್ನು ನಮೂದಿಸಿಲ್ಲ. ಅಂತೆಯೇ ಬ್ಯಾಂಕ್ ಖಾತೆಯಲ್ಲೂ ಬ್ಯಾಲೆನ್ಸ್ ಶೂನ್ಯ. ಪತ್ನಿ ಬಬಿತಾ ಚೌಹಾಣ್ ಬಳಿಯೂ ನಗದು, ಆಭರಣ ಅಥವಾ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲ. 100 ಚದರ ಯಾರ್ಡ್‍ನ ನಿವೇಶನ ಹೊಂದಿದ್ದು, ಇದರ ಅಂದಾಜು ಮೌಲ್ಯ 5 ಲಕ್ಷ ರೂಪಾಯಿ. 60 ಚದರ ಯಾರ್ಡ್‍ನಲ್ಲಿ ಮನೆ ಹೊಂದಿದ್ದು, ಇದರ ಮೌಲ್ಯ 15 ಲಕ್ಷ ರೂಪಾಯಿ. ಈ ಮನೆ ಮಂಗೇರಾಮ್ ಅವರ ಮಾವಂದಿರು ನೀಡಿದ ಉಡುಗೊರೆ. ಅವರ ಸ್ವಂತದ್ದೆಂದು ಇರುವುದು 36 ಸಾವಿರ ಮೌಲ್ಯದ ಒಂದು ಬೈಕ್ ಮಾತ್ರ!

ಇವರ ರಾಜಕೀಯ ಕನಸು ನನಸಾಗಲು ಧೀರ್ಘ ಕಾಲ ಬೇಕು. ಆದರೆ ಇದಕ್ಕೆ ಎದೆಗುಂದದ ಅವರು ನಗರದಲ್ಲೇ ಪಾದಯಾತ್ರೆ ಮೂಲಕವೇ ಸಂಚರಿಸಿ ಮತ ಯಾಚಿಸುತ್ತಿದ್ದಾರೆ. "ನನಗೆ ಬೈಕ್ ಇದೆ. ಆದರೆ ಅದಕ್ಕೆ ಪ್ರತಿ ದಿನ ಪೆಟ್ರೋಲ್ ತುಂಬುವ ಸ್ಥಿತಿಯಲ್ಲಿ ನಾನಿಲ್ಲ. ಪತ್ನಿ ಗೃಹಿಣಿಯಾಗಿದ್ದು, ಇಬ್ಬರು ಮಕ್ಕಳ ಆರೈಕೆಯಲ್ಲಿದ್ದಾಳೆ. ನಾನು ಬೇರೆ ಉದ್ಯೋಗ ಅರಸಿದ್ದೆ. ಆದರೆ ಯಾವುದೂ ಸಿಗಲಿಲ್ಲ" ಎಂದು ಹೇಳುತ್ತಾರೆ.

"ಕಳೆದ ಚುನಾವಣೆಯನ್ನೂ ನಾನು ನಡೆದುಕೊಂಡು ಹೋಗಿಯೇ ಮತ ಯಾಚಿಸಿದ್ದೆ. ದೊಡ್ಡ ರಾಜಕಾರಣಿಗಳು ಪ್ರಚಾರಕ್ಕಾಗಿ ಅಷ್ಟು ದೊಡ್ಡ ಮೊತ್ತ ವೆಚ್ಚ ಮಾಡುವ ಬದಲು ಜನರ ಕಲ್ಯಾಣಕ್ಕಾದರೂ ವಿನಿಯೋಗಿಸಬಾರದೇ ಎಂದು ಅಚ್ಚರಿಯಾಗುತ್ತದೆ" ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇವರ ಈ ಸಿದ್ಧಾಂತ ಮತದಾರರ ಮೇಲೆ ಪ್ರಭಾವ ಬೀರಿದೆಯೇ? ಇಲ್ಲ. ಇದುವರೆಗಿನ ಎಲ್ಲ ಚುನಾವಣೆಗಳಲ್ಲೂ ಅವರು ಠೇವಣಿ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News