ಬೇಬಿ ಶ್ಯಾಂಪೂನಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಎಂದ ವರದಿ

Update: 2019-04-01 10:45 GMT

ಹೊಸದಿಲ್ಲಿ, ಎ.1: ಜನಪ್ರಿಯ ಬ್ರಾಂಡ್ ಜಾನ್ಸನ್ & ಜಾನ್ಸನ್ಸ್ ನ "ನೋ ಮೋರ್ ಟಿಯರ್ಸ್" ಬೇಬಿ ಶ್ಯಾಂಪೂವಿನಲ್ಲಿ ಕ್ಯಾನ್ಸರ್‍ ಕಾರಕ ಅಂಶ ಪತ್ತೆಯಾಗಿದೆ ಎಂದು ರಾಜಸ್ಥಾನ ಔಷಧಗಳ ನಿರೀಕ್ಷಕರು ಹೇಳಿದ್ದಾರೆ. ಇದರೊಂದಿಗೆ ಅಮೆರಿಕದ ಫಾರ್ಮಸ್ಯೂಟಿಕಲ್ ದಿಗ್ಗಜ ಕಂಪನಿಯ ಮತ್ತೊಂದು ಉತ್ಪನ್ನ ವಿವಾದಕ್ಕೆ ಸಿಲುಕಿದೆ. ಆದರೆ ಐದು ವರ್ಷದ ಹಿಂದೆಯೇ ಈ ವಿವಾದ ಇತ್ಯರ್ಥವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ರಾಜಸ್ಥಾನದ ಡ್ರಗ್ಸ್ ಕಂಟ್ರೋಲರ್ ರವಿವಾರ ನೀಡಿದ ನೋಟಿಸ್‍ ಪ್ರಕಾರ, ಶ್ಯಾಂಪೂವಿನ ಎರಡು ಬ್ಯಾಚ್‍ಗಳು ಫಾರ್ಮಲಡೈನ್ ಅಂಶದಿಂದ ಕಲಬೆರಕೆಯಾಗಿದೆ. ಈ ನೋಟಿಸನ್ನು ದೇಶಾದ್ಯಂತ ಎಲ್ಲ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಫಾರ್ಮಲಡೈನ್ ಕ್ಯಾನ್ಸರ್ ಕಾರಕ ಎಂದು ಗುರುತಿಸಲಾಗಿದೆ. ಇದು ದೇಹದಲ್ಲಿ ಕ್ಯಾನ್ಸರ್ ರೂಪುಗೊಳ್ಳಲು ಕಾರಣವಾಗುವ ವಸ್ತುವಾಗಿದೆ. ಈ ಎರಡೂ ಬ್ಯಾಚ್ ಶ್ಯಾಂಪೂಗಳು ಹಿಮಾಚಲ ಪ್ರದೇಶದ ಬಡ್ಡಿಯಲ್ಲಿರುವ ಜಾನ್ಸನ್ & ಜಾನ್ಸನ್ಸ್ ನ ಘಟಕದಲ್ಲಿ ತಯಾರಾಗಿವೆ.

"ಕಂಪನಿ ಹೇಳಿಕೊಂಡಿರುವುದಕ್ಕಿಂತ ಅಧಿಕ ಪ್ರಮಾಣದ ಫಾರ್ಮಲಡೈನ್ ಜೆ & ಜೆ ಶ್ಯಾಂಪೂವಿನಲ್ಲಿ ಇರುವುದು ಕಂಡುಬಂದಿದೆ. ಈ ಬಗ್ಗೆ ಕಂಪನಿಗೂ ಮಾಹಿತಿ ನೀಡಲಾಗಿದೆ" ಎಂದು ರಾಜಸ್ಥಾನದ ಡ್ರಗ್ ಕಂಟ್ರೋಲರ್ ರಾಜಾರಾಮ್ ಶರ್ಮಾ ಹೇಳಿದ್ದಾರೆ.

“ತಕ್ಷಣ ಈ ಕಳಂಕಿತ ಶ್ಯಾಂಪೂ ಬಾಟಲಿಗಳನ್ನು ಮಾರಾಟ ಮಳಿಗೆಗಳಿಂದ ವಾಪಾಸು ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಈ ಮಾದರಿಗಳು ಗುಣಮಟ್ಟವನ್ನು ಹೊಂದಿಲ್ಲ. ಈ ಮೂಲಕ ಬಳಕೆಗೆ ಯೋಗ್ಯವಲ್ಲ. ಬಳಕೆದಾರರಿಗೆ ಸೂಕ್ತ ಸುರಕ್ಷೆ ಒದಗಿಸುವ ದೃಷ್ಟಿಯಿಂದ ಇದನ್ನು ಲಭ್ಯವಿರುವ ವಾಸ್ತಾನಿನಿಂದ ಹಿಂದಕ್ಕೆ ಪಡೆಯಬೇಕು” ಎಂದು ಅವರು ಸೂಚಿಸಿದ್ದಾರೆ. ಆದರೆ ಪರೀಕ್ಷಾ ವರದಿಯ ಬಗ್ಗೆ ಕಂಪನಿ ವಕ್ತಾರರನ್ನು ಸಂಪರ್ಕಿಸಿದಾಗ, ಇದನ್ನು ಅಲ್ಲಗಳೆದಿದ್ದಾರೆ.

"ನಮಗೆ ನೀಡಿರುವ ಮಧ್ಯಂತರ ಫಲಿತಾಂಶವನ್ನು ನಾವು ಒಪ್ಪುವುದಿಲ್ಲ. ಪರೀಕ್ಷಾ ವಿಧಾನವನ್ನು ಅಥವಾ ಪರಿಮಾಣಾತ್ಮಕ ಅಂಶಗಳನ್ನು ಸರ್ಕಾರ ಬಹಿರಂಗಪಡಿಸಿಲ್ಲ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News