ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ: ರಾಮಲಿಂಗಾ ರೆಡ್ಡಿ

Update: 2019-04-01 17:46 GMT

ಬೆಂಗಳೂರು, ಎ.1: ಬಿಜೆಪಿಯ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಅವರನ್ನು ಗೆಲ್ಲಿಸುವುದು ಮೈತ್ರಿ ಪಕ್ಷಗಳ ಪರಮ ಗುರಿಯಾಗಿದೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸೋಮವಾರ ಪದ್ಮನಾಭ ನಗರದಲ್ಲಿ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಬಿಜೆಪಿ ನಾಯಕರು ಮತ್ತು ಕೇಂದ್ರ ಸರಕಾರದ ಸುಳ್ಳು ಭರವಸೆಗಳಿಗೆ ಕ್ಷೇತ್ರದ ಜನತೆ ಮನ್ನಣೆ ನೀಡುವುದಿಲ್ಲ ಎಂದರು.

ಪ್ರಧಾನಿ ಮೋದಿ ಸರಕಾರ ಜನರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಉದ್ಯೋಗ ಸೃಷ್ಟಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಇದರಿಂದ ಯುವ ಸಮೂಹ ನಿರಾಶೆಗೊಂಡಿದೆ. ಕಪ್ಪು ಹಣ ತಂದು ದೇಶ ಉದ್ಧಾರ ಮಾಡುತ್ತೇವೆ ಎಂದು ಹೇಳಿದ್ದ ಮೋದಿ ಎಷ್ಟು ಕಪ್ಪು ಹಣ ತಂದಿದ್ದಾರೆ. ಏನೆಲ್ಲಾ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎನ್ನುವುದನ್ನು ಜನತೆ ನೋಡಿದ್ದಾರೆ.

ಹೀಗಾಗಿ ಈ ಬಾರಿ ಬಿಜೆಪಿ ಭದ್ರಕೋಟೆ ಒಡೆದು ತೋರಿಸಬೇಕಾಗಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮೆಲ್ಲರ ಗುರಿಯಾಗಬೇಕು. ಇದಕ್ಕಾಗಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಒಟ್ಟಿಗೆ ಶ್ರಮಿಸಬೇಕು. ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಬೇಕು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಕಂಕಣಬದ್ಧರಾಗಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಬೇಕಾಗಿದೆ. ಬಿಜೆಪಿಯ ಬಣ್ಣದ ಮಾತುಗಳಿಗೆ ಈ ಬಾರಿ ಕ್ಷೇತ್ರದ ಮತದಾರರು ಮರಳಾಗುವುದಿಲ್ಲ ಎಂದರು.

ಮಹಿಳೆಯರು ಸೇರಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದ ಸಮಾವೇಶದಲ್ಲಿ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್, ಎಂ.ಶ್ರೀನಿವಾಸ್ ಹಾಗೂ ಗುರಪ್ಪ ನಾಯ್ಡು, ಮಂಜುಳಾ ನಾಯ್ಡು, ವೆಂಕಟೇಶ್, ಜೆಡಿಎಸ್ ಜಿಲ್ಲಾಧ್ಯಕ್ಷರು ಪ್ರಕಾಶ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News