ರಸ್ತೆ ಅಪಘಾತ ತಡೆಗಟ್ಟಲು ಮಕ್ಕಳಿಗೆ ಸುರಕ್ಷತಾ ಪಾಠ ಬೋಧನೆ

Update: 2019-04-01 17:53 GMT

ಬೆಂಗಳೂರು, ಎ.1: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆಯ ಜಂಟಿಯಾಗಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಪಾಠದ ಬೋಧನೆಗೆ ನಿರ್ಧರಿಸಲಾಗಿದೆ.

ಪ್ರತಿನಿತ್ಯ ರಸ್ತೆ ಅಪಘಾತಗಳು ಅಧಿಕವಾಗುತ್ತಿದ್ದು, ಅದರಲ್ಲಿ ವಿದ್ಯಾರ್ಥಿಗಳ ಪಾಲೂ ಇರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತಳಮಟ್ಟದಿಂದಲೇ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಸಾರಿಗೆ ಇಲಾಖೆಯ ರಸ್ತೆ ಸುರಕ್ಷತಾ ಕೋಶದ ಸಹಯೋಗದೊಂದಿಗೆ ರಸ್ತೆ ಸುರಕ್ಷತೆ ಬಗ್ಗೆ ತರಗತಿ ನಡೆಸಲು ಮುಂದಾಗಿದ್ದಾರೆ.

ರಸ್ತೆ ಸುರಕ್ಷತೆಯ ಶಿಕ್ಷಣ ಪಠ್ಯಕ್ರಮದ ಕರಡು ಪ್ರತಿ ರೂಪಿಸಿದೆ. 60 ಪುಟಗಳ ಪುಸ್ತಕ ಇದಾಗಿದ್ದು, ರಸ್ತೆ ಸುರಕ್ಷೆಯ ಸಂಪೂರ್ಣ ಮಾಹಿತಿ ಒಳಗೊಂಡಿದೆ. ಸದ್ಯ ಇದು ಕರಡು ಪ್ರತಿಯಾಗಿದ್ದು, ಆಕ್ಷೇಪಣೆಗೆ ಅವಕಾಶ ಕಲ್ಪಿಸಿದೆ. ಆಕ್ಷೇಪಣೆಗಳು ಬಂದ ನಂತರ ಆವಶ್ಯಕವಿದ್ದರೆ ತಿದ್ದುಪಡಿ ಮಾಡಿ ಹೊಸ ಪಠ್ಯಕ್ರಮ ರೂಪಿಸಲಿದೆ. ಬಳಿಕ ಅದರಲ್ಲಿರುವ ವಿಷಯಗಳ ಕುರಿತು ಬೋಧನೆ ಮಾಡಲಾಗುವುದು. ಇದರಿಂದಾಗಿ ವಿದ್ಯಾರ್ಥಿಗಳು ಮಾತ್ರವಲ್ಲ, ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಿಂದ ರಸ್ತೆ ಸುರಕ್ಷತೆ ಕುರಿತ ಪಾಠ ಕೇಳಬೇಕಿದೆ.

ಪಠ್ಯದಲ್ಲಿ ಏನಿರುತ್ತದೆ: ರಸ್ತೆ ಸುರಕ್ಷತೆಯ ಪ್ರಾಮುಖ್ಯತೆ, ರಸ್ತೆ ಸಂಕೇತಗಳು, ಚಿನ್ಹೆಗಳು, ಸಂಚಾರಿ ದೀಪಗಳು ಮತ್ತು ಅವುಗಳ ಪಾತ್ರ, ಸಂಚಾರ ಸುರಕ್ಷತೆಯ ನಿಯಮಗಳ ಪಾಲನೆ, ಪ್ರಥಮ ಚಿಕಿತ್ಸೆ, ಸಂಚಾರ ಸುರಕ್ಷೆಯ ಸಾಧನಗಳು, ಕ್ರಿಯಾ ಯೋಜನೆ, ಪರಾಮರ್ಶನ ಗ್ರಂಥಗಳು ಮತ್ತು ವೆಬ್‌ಲಿಂಕ್‌ಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಸ್ತೆ ಅಪಘಾತ ಹೆಚ್ಚಳ: ರಸ್ತೆ ಸುರಕ್ಷತಾ ಕ್ರಮಗಳು ಅನುಸರಿಸದ ಹಿನ್ನೆಲೆಯಲ್ಲಿ ಪ್ರತಿ ವರ್ಷ ರಾಜ್ಯದಲ್ಲಿ ಸಾವಿರಾರು ರಸ್ತೆ ಅಪಘಾತಗಳು ನಡೆಯುತ್ತಿವೆ. 2016ರಲ್ಲಿ 44,403 ಅಪಘಾತಗಳಾಗಿದ್ದು, 11,133 ಜನರು ಸಾವನಪ್ಪಿದ್ದಾರೆ. 54,556 ಮಂದಿ ಗಾಯಗೊಂಡಿದ್ದಾರೆ. ಸುರಕ್ಷಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವುದರಿಂದ 2017ರ ವೇಳೆಗೆ ಇದರ ಪ್ರಮಾಣ ಇಳಿಮುಖವಾಗಿದೆ. 2017ರಲ್ಲಿ 42,448 ರಸ್ತೆ ಅಪಘಾತಗಳಾಗಿದ್ದು, 10,283 ಜನರು ಸಾವನಪ್ಪಿದ್ದಾರೆ. 53,562 ಮಂದಿ ಗಾಯಗೊಂಡಿದ್ದಾರೆ. ಬೆಂಗಳೂರಲ್ಲಿ 2018ರಲ್ಲಿ 455 ಜನ ಸಾವನಪ್ಪಿದ್ದಾರೆ.

ಸಂಚಾರಿ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಗಳು ಸೂಚಿಸಿರುವ ರಸ್ತೆ ಸುರಕ್ಷತಾ ಮಾರ್ಗಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಸಾವು-ನೋವು ಸಂಭವಿಸಲ್ಲ. ಆದುದರಿಂದಾಗಿ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಜಾಗೃತಿ ಮೂಡಿಸಿದರೆ ಮುಂದಿನ ದಿನಗಳಲ್ಲಿ ಈ ಕುರಿತು ಎಚ್ಚೆತ್ತುಕೊಳ್ಳುತ್ತಾರೆ ಎಂಬ ಉದ್ದೇಶದಿಂದ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ.

-ಎಸ್.ಆರ್.ಉಮಾಶಂಕರ್, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News