ಸ್ಥಳೀಯ ಚುನಾವಣೆ: ಟರ್ಕಿ ರಾಜಧಾನಿ ಮೇಲೆ ನಿಯಂತ್ರಣ ಕಳೆದುಕೊಂಡ ರಿಸೆಪ್ ತಯ್ಯಿಬ್ ಎರ್ದೊಗಾನ್

Update: 2019-04-01 18:44 GMT

ಇಸ್ತಾನ್‌ಬುಲ್,ಎ.1: ಟರ್ಕಿಯಲ್ಲಿ ನಡೆದ ಪ್ರಮುಖ ವಿದ್ಯಮಾನವೊಂದರಲ್ಲಿ ಅಧ್ಯಕ್ಷ ರಿಸೆಪ್ ತಯ್ಯಿಬ್ ಎರ್ದೊಗಾನ್ ಸ್ಥಳೀಯ ಚುನಾವಣೆಯಲ್ಲಿ ರಾಜಧಾನಿ ಅಂಕಾರದ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಪ್ರಾಥಮಿಕ ಫಲಿತಾಂಶಗಳಲ್ಲಿ ಇಸ್ತಾನ್‌ಬುಲ್‌ನಲ್ಲಿ ಅಧ್ಯಕ್ಷರ ಜಸ್ಟಿಸ್ ಆ್ಯಂಡ್ ಡೆವಲಪ್ಮೆಂಟ್ ಪಕ್ಷ (ಎಕೆಪಿ) ವಿರೋಧಿ ಬಣದಿಂದ ಹಿಂದೆ ಬಿದ್ದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಫಲಿತಾಂಶ ನಿಜವಾದರೆ, 2003ರಲ್ಲಿ ಪ್ರಧಾನ ಮಂತ್ರಿಯಾದಂದಿನಿಂದ ಟರ್ಕಿ ರಾಜಕೀಯದ ಮೇಲೆ ಹಿಡಿತ ಸಾಧಿಸಿರುವ ಎರ್ದೊಗಾನ್‌ಗೆ ತೀವ್ರ ಹೊಡೆತ ಬೀಳಲಿದೆ ಎಂದು ವರದಿ ಮಾಡಲಾಗಿದೆ.

ಅಂಕಾರದಲ್ಲಿ ವಿರೋಧ ಪಕ್ಷವಾದ ಪೀಪಲ್ಸ್ ರಿಪಬ್ಲಿಕನ್ ಪಾರ್ಟಿ (ಸಿಎಚ್‌ಪಿ) ಶೇ.50ಕ್ಕೂ ಅಧಿಕ ಮತಗಳನ್ನು ಪಡೆದುಕೊಂಡಿದ್ದರೆ ಎಕೆಪಿ ಶೇ.47 ಮತಗಳನ್ನು ಪಡೆದು ಹಿನ್ನಡೆ ಸಾಧಿಸಿದೆ ಎಂದು ಸುದ್ದಿ ಸಂಸ್ಥೆ ಅನಡೊಲು ತಿಳಿಸಿದೆ. 25 ವರ್ಷಗಳಲ್ಲಿ ಇದೇ ಮೊದಲ ಬಾರಿ ಎರ್ದೊಗಾನ್ ಪಕ್ಷ ರಾಜಧಾನಿಯ ಮೇಲಿನ ತನ್ನ ಹಿಡಿತವನ್ನು ಕಳೆದುಕೊಂಡಿದೆ. ಆಕ್ಷೇಪಗಳು ಎದುರಾದ ಕಾರಣ 84 ಮತ ಪೆಟ್ಟಿಗೆಗಳ ಫಲಿತಾಂಶವನ್ನು ಅಂತಿಮ ಎಣಿಕೆಯಲ್ಲಿ ಸೇರಿಸಲಾಗಿಲ್ಲ ಎಂದು ಟರ್ಕಿಯ ಸರ್ವೋಚ್ಚ ಚುನಾವಣಾ ಮಂಡಳಿ ತಿಳಿಸಿದೆ. ಹಾಗಾಗಿ ಎರಡೂ ಪಕ್ಷಗಳು ಇಸ್ತಾನ್‌ಬುಲ್‌ನಲ್ಲಿ ಗೆಲುವು ಸಾಧಿಸಿರುವುದಾಗಿ ಹೇಳಿಕೆ ನೀಡುತ್ತಿವೆ ಎಂದು ಅನಡೊಲು ವರದಿ ಮಾಡಿದೆ. ಪ್ರಾಥಮಿಕ ಫಲಿತಾಂಶದ ಪ್ರಕಾರ, ವಿರೋಧ ಪಕ್ಷದ ಅಭ್ಯರ್ಥಿ ಇಕ್ರೆಮ್ ಇಮಮೊಗ್ಲು 25,000 ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ. ಆದರೆ 3,00,000 ಮತಗಳು ಅಸಿಂಧುವಾಗಿವೆ ಎಂದು ಎಕೆಪಿಯ ಇಸ್ತಾನ್‌ಬುಲ್‌ನ ಮೇಯರ್ ಅಭ್ಯರ್ಥಿ ಬಿನಲಿ ಯಿಲ್ದಿರಿಮ್ ಸೋಮವಾರ ತಿಳಿಸಿದ್ದಾರೆ. ಇದೊಂದು ಗಂಭೀರ ವಿಷಯವಾಗಿದ್ದು ತಪ್ಪುಗಳು ನಡೆದಿರುವ ಸಾಧ್ಯತೆಯಿದೆ. ಅಧಿಕೃತ ಚುನಾವಣಾ ಮಂಡಳಿ ಘೋಷಣೆ ಮಾಡಿದ ನಂತರವೇ ನಾವು ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇವೆ ಎಂದು ಬಿನಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News