​ಯುಎಇ ಕುಟುಂಬ ವೀಸಾ ನೀತಿ ಸಡಿಲ

Update: 2019-04-02 04:20 GMT

ದುಬೈ, ಎ. 2: ಹೊಸ ಕುಟುಂಬ ವೀಸಾ ನೀತಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಅನುಮೋದನೆ ನೀಡಿದ್ದು, ಇದರಿಂದ ಲಕ್ಷಾಂತರ ಭಾರತೀಯರು ಪ್ರಯೋಜನ ಪಡೆಯಲಿದ್ದಾರೆ.

ಹೊಸ ನೀತಿಯ ಅನ್ವಯ ವಿದೇಶಿ ಉದ್ಯೋಗಿಗಳು ಆದಾಯ ಮಾನದಂಡವನ್ನು ತಲುಪಿದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಪ್ರಾಯೋಜಿಸಬಹುದಾಗಿದೆ.
ಯುಎಇ ಜನಸಂಖ್ಯೆಯಲ್ಲಿ ಅತ್ಯಧಿಕ ಪಾಲು ಹೊಂದಿರುವ ಭಾರತೀಯರಿಗೆ ಈ ನೂತನ ನೀತಿ ವರದಾನವಾಗಲಿದೆ. ಸುಮಾರು 33 ಲಕ್ಷ ಅನಿವಾಸಿ ಭಾರತೀಯರು ಯುಎಇನಲ್ಲಿ ವಾಸವಿದ್ದು, ಇದು ಯುಎಇಯ ಒಟ್ಟು ಜನಸಂಖ್ಯೆಯ ಶೇಕಡ 30ರಷ್ಟು ಎಂದು ಭಾರತೀಯ ದೂತವಾಸದ ಮೂಲಗಳು ಹೇಳಿವೆ.

ವಿದೇಶಿ ಉದ್ಯೋಗಿಗಳು ಯುಎಇನಲ್ಲಿ ತಮ್ಮ ಕುಟುಂಬವನ್ನು ಪ್ರಾಯೋಜಿಸಲು ಆದಾಯ ಮಾತ್ರ ಅಗತ್ಯತೆಯಾಗಿರುತ್ತದೆ. ಈ ಮೊದಲು ಪಟ್ಟಿ ಮಾಡಲಾದ ವೃತ್ತಿಪರರಿಗಷ್ಟೇ ಈ ಸೌಲಭ್ಯ ಇತ್ತು. ಆದರೆ ಇದಕ್ಕೆ ತಿದ್ದುಪಡಿ ತಂದು ವಿದೇಶಿ ಉದ್ಯೋಗಿಗಳು ತಮ್ಮ ಕುಟುಂಬವನ್ನು ಪ್ರಾಯೋಜಿಸಲು ಕೇವಲ ಆದಾಯವನ್ನಷ್ಟೇ ಮಾನದಂಡವಾಗಿ ಪರಿಗಣಿಸಲು ನಿರ್ಧರಿಸಲಾಗಿದೆ ಎಂದು ಯುಎಇ ಸಚಿವ ಸಂಪುಟ ಪ್ರಕಟಿಸಿದೆ.

ಯುಎಇ ಪ್ರತಿಭೆಗಳ ಹಬ್ ಮತ್ತು ಅವಕಾಶಗಳ ನೆಲ ಎನ್ನುವುದನ್ನು ಸಚಿವ ಸಂಪುಟದ ಈ ನಿರ್ಧಾರ ಮತ್ತೆ ದೃಢಪಡಿಸಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ಈ ಮಾರ್ಗಸೂಚಿಯ ಅನ್ವಯ ಮಾಸಿಕ 4000 ದಿರ್ಹಮ್ (ಸುಮಾರು 75 ಸಾವಿರ ರೂಪಾಯಿ) ಅಥವಾ 3000 ದಿರ್ಹಮ್ (56 ಸಾವಿರ ರೂಪಾಯಿ) ಆದಾಯ ಹಾಗೂ ವಸತಿ ವ್ಯವಸ್ಥೆ ಹೊಂದಿದ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸಿಸಲು ಅವಕಾಶವಿದೆ. ಆದರೆ ಎಷ್ಟೇ ಆದಾಯ ಹೊಂದಿದ್ದರೂ, ಮನೆಕೆಲಸದವರು ಮತ್ತು ಇತರ ಕೆಲ ನಿರ್ದಿಷ್ಟ ವರ್ಗದವರಿಗೆ ಈ ಸೌಲಭ್ಯ ಇರುವುದಿಲ್ಲ.

ಅಂತೆಯೇ ಮಹಿಳೆಯರು ಶಿಕ್ಷಕಿ, ಎಂಜಿನಿಯರ್ ಅಥವಾ ಆರೋಗ್ಯ ವೃತ್ತಿಪರರಾಗಿದ್ದು, 4000 ದಿರ್ಹಮ್ ಆದಾಯ ಹೊಂದಿದ್ದರೆ ಮಾತ್ರ ಕುಟುಂಬದೊಂದಿಗೆ ಇರಲು ಅವಕಾಶವಿದೆ. ಇತರ ವೃತ್ತಿಗಳಲ್ಲಿದ್ದರೆ ಅಂಥ ಮಹಿಳೆಯರ ಮಾಸಿಕ ಆದಾಯ 10 ಸಾವಿರ ದಿರ್ಹಮ್ ಇರಬೇಕು ಹಾಗೂ ವಾಸ ಹಾಗೂ ವಿದೇಶಿ ವ್ಯವಹಾರಗಳ ಮಹಾನಿರ್ದೇಶನಾಲಯದಿಂದ ಅನುಮತಿ ಪಡೆದಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News