ಹಾರ್ದಿಕ್ ಪಟೇಲ್ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

Update: 2019-04-02 07:45 GMT

 ಹೊಸದಿಲ್ಲಿ, ಎ.2: 2015ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮೇಲಿನ ಆರೋಪವನ್ನು ಕೈಬಿಟ್ಟು ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶವನ್ನು ಕೋರಿ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದೆ.

  ಕಳೆದ ವರ್ಷ ಆಗಸ್ಟ್‌ನಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಆದೇಶ ಹೊರಬಂದಿರುವ ಹಿನ್ನೆಲೆಯಲ್ಲಿ ಈ ವಿಚಾರದ ಬಗ್ಗೆ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಪಟೇಲ್ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರಿಗೆ ಜಸ್ಟಿಸ್ ಅರುಣ್ ಮಿಶ್ರಾ, ಜಸ್ಟಿಸ್ ಎಂಎಂ ಶಾಂತನಗೌಡರ್ ಹಾಗೂ ನವೀನ್ ಸಿನ್ಹಾ ಅವರಿದ್ದ ನ್ಯಾಯಪೀಠ ತಿಳಿಸಿದೆ.

ಇತ್ತೀಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ಪಟೇಲ್, ಗಲಭೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮೇಲಿನ ಆರೋಪಕ್ಕೆ ತಡೆ ಹೇರಲು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದ್ದನ್ನು ಪ್ರಶ್ನಿಸಿ ಸೋಮವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

25ರ ಹರೆಯದ ಪಟೇಲ್ ಮಾ.12 ರಂದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗುಜರಾತ್‌ನ ಜಾಮ್‌ನಗರ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಸ್ಪರ್ಧಿಸಲು ಬಯಸಿದ್ದರು. ಎ.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಗುಜರಾತ್‌ನ 26 ಲೋಕಸಭಾ ಕ್ಷೇತ್ರಗಳಲ್ಲಿ ಎ.23 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಹಾರ್ದಿಕ್ ನೇತೃತ್ವದಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ಆಗ್ರಹಿಸಿ ವಿಸ್‌ನಗರದಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ನಡೆದ ಗಲಭೆ ಪ್ರಕರಣದಲ್ಲಿ ಮೆಹ್ಸಾನಾ ಜಿಲ್ಲೆಯ ವಿಸ್‌ನಗರದ ಸೆಶನ್ಸ್ ನ್ಯಾಯಾಲಯ 2018ರ ಜುಲೈನಲ್ಲಿ ಪಟೇಲ್‌ಗೆ 2 ವರ್ಷ ಶಿಕ್ಷೆ ವಿಧಿಸಿತ್ತು. 2018ರ ಆಗಸ್ಟ್‌ನಲ್ಲಿ ಗುಜರಾತ್ ಹೈಕೋರ್ಟ್ ಪಟೇಲ್‌ಗೆ ವಿಧಿಸಿದ್ದ ಶಿಕ್ಷೆಯನ್ನು ವಜಾಗೊಳಿಸಿತ್ತು. ಆದರೆ, ದೋಷಾರೋಪವನ್ನು ಕೈಬಿಡಲು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News