ರೈತರಿಗೆ ಪ್ರತ್ಯೇಕ ಕೃಷಿ ಬಜೆಟ್, 22 ಲಕ್ಷ ಸರಕಾರಿ ಹುದ್ದೆ ಭರ್ತಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನೇನಿದೆ?

Update: 2019-04-02 15:31 GMT

 ಹೊಸದಿಲ್ಲಿ, ಎ. 2: ಉತ್ತಮ ಆಡಳಿತ, ರೈತರ ಸಾಲದ ಹೊರೆಯಿಂದ ಮುಕ್ತಗೊಳಿಸುವುದು, ಈಗಿರುವ ಉದ್ಯೋಗಗಳ ರಕ್ಷಣೆಯೊಂದಿಗೆ ಹೊಸ ಉದ್ಯೋಗಗಳ ಸೃಷ್ಟಿ, ಯಾವುದೇ ಪಕ್ಷಪಾತವಿಲ್ಲದೆ ಭ್ರಷ್ಟಾಚಾರ ನಿಗ್ರಹ ಕಾನೂನು ಅನುಷ್ಠಾನ ಸೇರಿದಂತೆ ಹಲವು ಪ್ರಮುಖ ಭರವಸೆಗಳನ್ನು ನೀಡುವ ‘‘ಹಮ್ ನಿಭಾಯೇಂಗೆ’’ ಶೀರ್ಷಿಕೆಯ 55 ಪುಟಗಳ ಪ್ರಣಾಳಿಕೆಯನ್ನು ಕಾಂಗ್ರೆಸ್ ಮಂಗಳವಾರ ಬಿಡುಗಡೆಗೊಳಿಸಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದರು.

   2019 ಎಪ್ರಿಲ್ 1ರ ವರೆಗೆ ಕೇಂದ್ರ ಸರಕಾರ, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು, ನ್ಯಾಯಾಂಗ ಹಾಗೂ ಸಂಸತ್ತಿನ ಖಾಲಿ ಇದ್ದ 4 ಲಕ್ಷ ಉದ್ಯೋಗಳಿಗೆ 2020 ಮಾರ್ಚ್ ಅಂತ್ಯದ ಒಳಗೆ ನೇಮಕಾತಿ. ಎರಡು ಕ್ಷೇತ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಸುಮಾರು 20 ಲಕ್ಷ ಉದ್ಯೋಗಗಳಿಗೆ ನೇಮಕಾತಿ ನಡೆಸಲು ರಾಜ್ಯ ಸರಕಾರಗಳಲ್ಲಿ ಕಾಂಗ್ರೆಸ್ ಮನವಿ ಮಾಡಲಿದೆ.

ಕನಿಷ್ಠ ಆದಾಯ ಖಾತರಿ ಯೋಜನೆಯಂತೆ ದೇಶದ ಶೇ. 20 ಕಡು ಬಡ ಕುಟುಂಬಕ್ಕೆ ವಾರ್ಷಿಕ 72,000 ರೂಪಾಯಿ ವರ್ಗಾವಣೆ ಮಾಡಲಿದೆ. ಈ ಹಣವನ್ನು ಮಹಿಳೆಯರ ಖಾತೆಗೆ ವರ್ಗಾಯಿಸಲಾಗುವುದು.

ಸರಕಾರ ಅಸ್ತಿತ್ವಕ್ಕೆ ಬಂದ ಮೊದಲ ವರ್ಷ ನೇರ ತೆರಿಗೆ ಕೋಡ್ ಜಾರಿ, ಜಿಎಸ್‌ಟಿ ಕಾನೂನಿನ ಸ್ಥಾನದಲ್ಲಿ ಸುಧಾರಿತ ಜಿಎಸ್‌ಟಿ 2.0 ಕಾನೂನನ್ನು ಅಸ್ತಿತ್ವಕ್ಕೆ, ಇ-ವೇ ಬಿಲ್ ಪಾವತಿ ರದ್ದು ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.

   ಆಡಳಿತಾರೂಢ ಪಕ್ಷಗಳಿಗೆ ಅನುಕೂಲಕರವಾಗಿ ವಿನ್ಯಾಸಗೊಳಿಸಾದ ಅಪಾರದರ್ಶಕ ಮತದಾರ ಬಾಂಡ್ ಯೋಜನೆ ರದ್ದು, ಯಾವುದೇ ವ್ಯಕ್ತಿ ದೇಣಿಗೆ ನೀಡುವ ರಾಷ್ಟ್ರೀಯ ಚುನಾವಣಾ ನಿಧಿ ಅಸ್ತಿತ್ವಕ್ಕೆ, ಶೇ. 50 ಇವಿಎಂಗಳನ್ನು ವಿವಿ ಪ್ಯಾಟ್‌ಗಳೊಂಗೆ ಹೋಲಿಕೆ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ.

ಮಾನನಷ್ಟ ಹಾಗೂ ದೇಶದ್ರೋಹವನ್ನು ನಿರಪರಾಧೀಕರಣಗೊಳಿಸುವ, ವಿಚಾರಣೆ ಇಲ್ಲದೆ ವಶಕ್ಕೆ ಅವಕಾಶ ನೀಡುವ ಕಾನೂನು ತಿದ್ದುಪಡಿ, ಚಿತ್ರ ಹಿಂಸೆ ತಡೆ ಕಾಯ್ದೆ ಮಂಜೂರು, ಎಎಸ್‌ಎಫ್‌ಪಿಎ ತಿದ್ದುಪಡಿ, ಕಾರಾಗೃಹಗಳ ಸಮಗ್ರ ಸುಧಾರಣೆ.

ಯಾವುದೇ ತಾರತಮ್ಯವಿಲ್ಲದೆ ಭ್ರಷ್ಟಾಚಾರ ವಿರೋಧಿ ಕಾನೂನು ಜಾರಿ, ರಫೇಲ್ ಒಪ್ಪಂದ ಸಹಿತ ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರಕಾರ ಮಾಡಿಕೊಂಡ ಹಲವು ಒಪ್ಪಂದಗಳ ತನಿಖೆ ಮಾಡಲಾಗುವುದು ಎಂದು ಅದು ಹೇಳಿದೆ.

 ನೀತಿ ಆಯೋಗದ ರದ್ದು ಹಾಗೂ ಜವಾಬ್ದಾರಿಯ ಮರು ವ್ಯಾಖ್ಯಾನಿಸಿ ಯೋಜನಾ ಆಯೋಗದ ಸ್ಥಾಪನೆ. ಕೃಷಿ ಸಾಲಗಳ ಮನ್ನಾ, ಪ್ರತ್ಯೇಕ ಕಿಸಾನ್ ಬಜೆಟ್ ಮಂಡನೆ, ಬಿಜೆಪಿಯ ವಿಫಲವಾದ ಫಸಲ್ ಬೀಮಾ ಯೋಜನೆಯ ಮರು ವಿನ್ಯಾಸ, ಬೋಧನೆ, ಆರ್ ಆ್ಯಂಡ್ ಡಿ, ಕೃಷಿ ಸಂಬಂಧಿಸಿದ ಶುದ್ಧ ವಿಜ್ಞಾನ, ಕೃಷಿ ವಲಯದಲ್ಲಿ ಅನ್ವಯಿಕ ವಿಜ್ಞಾನ ಹಾಗೂ ತಂತ್ರಜ್ಞಾನ, ಮೂಲ ಭೂ ಸ್ವಾಧೀನ, ಪುನರ್ ವಸತಿ ಕಾಯ್ದೆ 2013 ಹಾಗೂ ಅರಣ್ಯ ಹಕ್ಕು ಕಾಯ್ದೆಯ ಮರು ಸ್ಥಾಪನೆ,

  ಉದ್ಯೋಗಗಳ ದಿನವನ್ನು 150ರ ವರೆಗೆ ಏರಿಕೆಯ ಖಾತರಿ ನೀಡುವ ಎಂಜಿಎನ್‌ಆರ್‌ಇಜಿಎ 3.0 ಆರಂಭಿಸುವ, ಎಲ್ಲ ಗ್ರಾಮಗಳು ಹಾಗೂ 250 ಜನಸಂಖ್ಯೆ ಉಳ್ಳ ವಸತಿ ಪ್ರದೇಶವನ್ನು ರಸ್ತೆಯೊಂದಿಗೆ ಸಂಪರ್ಕಿಸುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಆರಂಭ. ಸ್ವಂತ ಜಾಗ, ಸ್ವಂತ ಮನೆ ಇಲ್ಲದ ಪ್ರತಿಯೊಬ್ಬರಿಗೆ ಮನೆ ನೀಡುವ ಗೃಹ ಸಂಕೀರ್ಣ ಹಕ್ಕು ಕಾಯ್ದೆ ಅನುಷ್ಠಾನ.

 ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ. 1976ರ ಸಮಾನ ಗೌರವ ಧನ ಕಾಯ್ದೆ ಪರಿಣಾಮಕಾರಿಯಾಗಿ ಜಾರಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಕಾಯ್ದೆ 2013ರ ಸಮಗ್ರ ಮರು ಪರಿಶೀಲನೆ, ಮಹಿಳೆಯರು ಹಾಗೂ ಮಕ್ಕಳ ಮೇಲೆ ಕ್ರೂರ ಅಪರಾಧಗಳ ತನಿಖೆ ನಡೆಸಲು ಪ್ರತ್ಯೇಕ ತನಿಖಾ ಸಂಸ್ಥೆ ಸ್ಥಾಪನೆ.

  2020-21ರ ಒಳಗೆ ಜಿಡಿಪಿಯ ಶೇ. 3 ಗುರಿ ಸಾಧನೆ. 5 ವರ್ಷಗಳ ಅವಧಿ ಒಳಗಡೆ ಉತ್ಪಾದನಾ ವಲಯದಲ್ಲಿ ಭಾರತದ ಪಾಲನ್ನು ಪ್ರಸಕ್ತ ಜಿಡಿಪಿಯ ಶೇ. 16ರಿಂದ ಶೇ. 25ಕ್ಕೆ ಏರಿಕೆ ಮಾಡುವುದು ಹಾಗೂ ಜಗತ್ತಿನಲ್ಲೇ ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದು.

ಎಲ್ಲ ಹಳೆಯ ರೈಲ್ವೆ ಮೂಲ ಸೌಕರ್ಯಗಳನ್ನು ಅಧುನಿಕೀಕರಣ, ನಗರೀಕರಣದ ಕುರಿತು ಸಮಗ್ರ ನೀತಿ ರಚನೆ, ನಗರದ ಬಡ ಜನರಿಗೆ ಮನೆಯ ಹಕ್ಕು ಹಾಗೂ ನಿರಂಕುಶ ಒಕ್ಕಲೆಬ್ಬಿಸುವಿಕೆಯಿಂದ ರಕ್ಷಣೆ, ನೇರ ಆಯ್ಕೆಯಾದ ಮೇಯರ್ ಮೂಲಕ ನಗರ ಹಾಗೂ ಪಟ್ಟಣ ನೂತನ ಆಡಳಿತ ಮಾದರಿಯ ಪರಿಚಯ. ಸೇನಾ ಪಡೆಯ ಅಗತ್ಯಗಳನ್ನು ಪೂರೈಸಲು ರಕ್ಷಣಾ ವೆಚ್ಚವನ್ನು ಏರಿಸುವುದು, ಡಾಟಾ ಭದ್ರತೆ, ಸೈಬರ್ ಭದ್ರತೆ, ಹಣಕಾಸು ಭದ್ರತೆ, ಸಂವಹನ ಭದ್ರತೆ ನಿರ್ವಹಿಸಲು ಸೂಕ್ತ ನೀತಿ ರೂಪಿಸುವುದು, ರಕ್ಷಣಾ ಉತ್ಪನ್ನಗಳ ಉತ್ಪಾದನೆಯಲ್ಲಿ ದೇಶದ ಸಾಮರ್ಥ್ಯವನ್ನು ತೀವ್ರ ಏರಿಸುವುದು.

ವಿದೇಶಿ ನೀತಿಯ ಕುರಿತು ರಾಷ್ಟ್ರೀಯ ಮಂಡಳಿ ಸ್ಥಾಪನೆ, ಯುಎನ್‌ಎಸ್‌ಸಿ ಹಾಗೂ ನ್ಯೂಕ್ಲಿಯರ್ ಪೂರೈಕೆ ಗುಂಪಿನ ಖಾಯಂ ಸದಸ್ಯತ್ವ ಪಡೆಯಲು ಪ್ರಯತ್ನವನ್ನು ತೀವ್ರಗೊಳಿಸುವುದು. ವಿದೇಶಿ ಸೇವೆಗಳ ವ್ಯಾಪ್ತಿಯನ್ನು ಗಣನೀಯವಾಗಿ ಹೆಚ್ಚಿಸುವುದು ಮೊದಲಾದ ಭರವಸೆಯನ್ನು ಕಾಂಗ್ರೆಸ್ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News