ರಾಜಸ್ಥಾನ ರಾಜ್ಯಪಾಲರಿಂದ ನೀತಿಸಂಹಿತೆ ಉಲ್ಲಂಘನೆ: ಚು. ಆಯೋಗದ ಮೂಲಗಳು

Update: 2019-04-02 10:29 GMT

ಹೊಸದಿಲ್ಲಿ, ಎ.2: ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಚುನಾಯಿಸಬೇಕು ಎಂದು ಹೇಳುವ ಮೂಲಕ ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರು ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿವೆ ಎಂದು thewire.in ವರದಿ ಮಾಡಿದೆ.

ಈ ಸಂಬಂಧ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಅವರ ಗಮನಕ್ಕೆ ತರಲು ಆಯೋಗ ನಿರ್ಧರಿಸಿದೆ ಎಂದು ತಿಳಿದುಬಂದಿದೆ. “ತಮ್ಮನ್ನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಮೂಲಕ ಸಿಂಗ್ ಅವರು ರಾಜ್ಯಪಾಲರ ಕಚೇರಿಯ ಘನತೆಗೆ ಧಕ್ಕೆ ತಂದಿದ್ದಾರೆ" ಎಂಬ ಅಂಶವನ್ನು ರಾಷ್ಟ್ರಪತಿಗಳ ಗಮನಕ್ಕೆ ತರಲು ಆಯೋಗ ನಿರ್ಧರಿಸಿದೆ. ಚುನಾವಣಾ ಆಯೋಗದಿಂದ ಈ ಬಗ್ಗೆ ದೂರು ಬಂದಲ್ಲಿ ಮಾತ್ರ ರಾಷ್ಟ್ರಪತಿ ಕಚೇರಿ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ.

ಮಾರ್ಚ್ 23ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್ ಅವರು, "ಮೋದಿ ಗೆಲ್ಲಬೇಕು ಎನ್ನುವುದು ಪ್ರತಿಯೊಬ್ಬರ ಬಯಕೆ. ಇದು ದೇಶಕ್ಕೆ ಅಗತ್ಯ ಕೂಡಾ ಆಗಿದೆ" ಎಂದು ಹೇಳಿದ್ದರು. ಈ ಬಗ್ಗೆ ಆಯೋಗಕ್ಕೆ ದೂರು ನೀಡಲಾಗಿತ್ತು.

ಬಿಜೆಪಿಯ ಅಲಿಗಢ ಘಟಕದ ಆಂತರಿಕ ಕಚ್ಚಾಟವನ್ನು ತಿಳಿಗೊಳಿಸುವ ಸಂಬಂಧ ಮಾತನಾಡಿ, "ನಾವೆಲ್ಲರೂ ಬಿಜೆಪಿ ಕಾರ್ಯಕರ್ತರು. ಆದ್ದರಿಂದ ಬಿಜೆಪಿ ಗೆಲ್ಲಬೇಕು ಎನ್ನುವುದು ನಮ್ಮ ಬಯಕೆ. ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಮೋದಿ ಮತ್ತೆ ಪ್ರಧಾನಿಯಾಗುವುದು ಈ ದೇಶಕ್ಕೆ ಹಾಗೂ ಸಮಾಜಕ್ಕೆ ಬೇಕಾಗಿದೆ" ಎಂದು ಹೇಳಿದ್ದರು.

ಈ ಬಗ್ಗೆ ಚುನಾವಣಾ ಆಯೋಗ ಸತ್ಯಾಂಶ ವರದಿಯನ್ನು ಕೋರಿದ ಹಿನ್ನೆಲೆಯಲ್ಲಿ ಅಲೀಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ತಮ್ಮ ಪುರಾವೆ ಸಲ್ಲಿಸಿದ್ದರು. ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಗೆ ಈ ಸಂಬಂಧ ವಿವರ ಹಾಗೂ ದಾಖಲೆಗಳನ್ನು ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News