ಅಲ್ಪಸಂಖ್ಯಾತರಿಗೆ ಗುಡ್ ಬೈ ಹೇಳುತ್ತಿದೆಯೇ ಮುದಿ ಕಾಂಗ್ರೆಸ್ ಪಕ್ಷ?

Update: 2019-04-04 04:24 GMT

ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಗುಡ್ ಬೈ ಹೇಳುತ್ತಿದೆಯೇ ? ಬಹುಕಾಲದಿಂದ ಹಲವೆಡೆ ಹಲವರನ್ನು ಕಾಡುತ್ತಿದ್ದ ಈ ಪ್ರಶ್ನೆ ಇದೀಗ ಪ್ರಶ್ನೆಯಾಗಿ ಉಳಿದಿಲ್ಲ. ಸಾಕ್ಷಾತ್ ಕಾಂಗ್ರೆಸ್ ಪಕ್ಷವೇ ಇದಕ್ಕೆ ಬಹಳ ಸ್ಪಷ್ಟ ಉತ್ತರ ನೀಡಿ ಬಿಟ್ಟಿದೆ. ಸದಾ ಮೇಲ್ಜಾತಿಯವರ ಮುಷ್ಟಿಯಲ್ಲಿದ್ದ ಕಾಂಗ್ರೆಸ್ ಪಕ್ಷ ದೇಶದ ದಲಿತರು ಮತ್ತು ಅಲ್ಪಸಂಖ್ಯಾತರ ನಂಬಲರ್ಹ ಹಿತೈಷಿ ಎಂದು ಆ ಪಕ್ಷದ ಒಳಗುಟ್ಟುಗಳನ್ನು ಬಲ್ಲ ಯಾರೂ ಎಂದೂ ನಂಬಿದ್ದಿಲ್ಲ. ಆದರೂ ತಥಾಕಥಿತ ಜಾತ್ಯತೀತ ಪಕ್ಷಗಳ ಸಾಲಲ್ಲಿ ಇತರ ಪಕ್ಷಗಳಿಗಿಂತ ಹೆಚ್ಚು ಶಕ್ತ ಪಕ್ಷ ಎಂಬ ಕಾರಣಕ್ಕಾಗಿ ದಲಿತರು ಮತ್ತು ಅಲ್ಪಸಂಖ್ಯಾತರು ಆ ಪಕ್ಷವನ್ನು ಬೆಂಬಲಿಸುತ್ತಾ ಬಂದರು. ಅದು ಬಲದ ಕಡೆಗೆ ವಾಲಿರುವ ಅರಿವಿದ್ದರೂ ದಲಿತ ಮತ್ತು ಅಲ್ಪಸಂಖ್ಯಾತ ನಾಯಕರು ‘ಅನಿವಾರ್ಯ ಅನಿಷ್ಟ’ ಎಂದು ಕರೆಯುತ್ತಲೇ ಅದರ ಜೊತೆಗೆ ನಿಂತಿದ್ದರು. ಆದರೆ 1971 ರಲ್ಲಿ ಇಂದಿರಾಗಾಂಧಿಯವರು ದ್ವಿತೀಯ ಅವಧಿಗೆ ಪ್ರಧಾನಿಯಾದಾಗಿನಿಂದ ಕಾಂಗ್ರೆಸ್ ಪಕ್ಷವು ಕೇವಲ ಬಲಮುಖಿ ವಾಲಿಕೆಯ ಪರ್ವವನ್ನು ದಾಟಿ ನೇರವಾಗಿ ಬಲ ದಿಕ್ಕಿಗೆ ಹೆಜ್ಜೆ ಹಾಕಲು ಆರಂಭಿಸಿತು. ವಿನಾಶಕಾರಿ ಬಲಪಂಥೀಯ ವಿಚಾರ ಧಾರೆಯನ್ನು ಹೊಸಕಿ ಹಾಕುವ ಬದಲು ಅದರ ಬಗ್ಗೆ ಅಪಾರ ಸಂಯಮದ ನಿಲುವು ತಾಳಿತು. ಮಾತ್ರವಲ್ಲ, ಕ್ರಮೇಣ, ಅಲಿಖಿತವಾಗಿ ಬಲ ಪಂಥೀಯ ಧೋರಣೆಗಳನ್ನೇ ತನ್ನ ಧೋರಣೆಗಳಾಗಿ ಅಳವಡಿಸಿಕೊಳ್ಳತೊಡಗಿತು. ಇದೀಗ 2019 ರ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷವು ಹೊರಡಿಸಿರುವ ಪ್ರಣಾಳಿಕೆಯು, ಬಿಜೆಪಿ ಎಂಬುದು ಬಲಪಂಥದ ಟೀಮ್ - ಎ ಆಗಿದ್ದರೆ, ಕಾಂಗ್ರೆಸ್ ಅದೇ ಪಂಥದ ಟೀಮ್ - ಬಿ ಆಗಿದೆ ಎಂಬುದನ್ನು ಸಂಶಯಾತೀತವಾಗಿ ಸಾಬೀತು ಪಡಿಸಿದೆ.

ಒಂದು ಸಮುದಾಯವನ್ನುದ್ದೇಶಿಸಿ ನಮಗೆ ನಿಮ್ಮ ಅಗತ್ಯವಿಲ್ಲ ಎಂದು ಹೇಳುವುದಕ್ಕೆ ಅಷ್ಟೆಲ್ಲಾ ಪದಗಳನ್ನು ಬಳಸಬೇಕಾಗಿಲ್ಲ. ಅದೇ ಮಾತನ್ನು ಬೇರೆ ಹಲವು ವಿಧಾನಗಳಿಂದ ಹೇಳಬಹುದು. ಎಲ್ಲ ರಾಜಕಾರಣಿಗಳು ನಮ್ಮ ಈಶ್ವರಪ್ಪರ ಹಾಗೆ ಮುಗ್ಧ ಸತ್ಯವಂತರಾಗಿರುವುದಿಲ್ಲ. ಕಾಂಗ್ರೆಸ್ ಆ ಮಾತನ್ನು ತನ್ನ ಪ್ರಣಾಳಿಕೆಯ ಮೂಲಕ ಹಾಗೂ ತನ್ನ ಕೆಲವು ಪ್ರಮುಖ ನಿರ್ಧಾರಗಳ ಮೂಲಕ ಪರೋಕ್ಷವಾಗಿ ಹೇಳಿದೆ. ಕಾಂಗ್ರೆಸ್‌ನ ಪ್ರಸ್ತುತ ಪ್ರಣಾಳಿಕೆ ತಯಾರಾಗುವ ಒಂದು ತಿಂಗಳ ಮುನ್ನವೇ, ವಿವಿಧ ಅಲ್ಪಸಂಖ್ಯಾತ ಗುಂಪುಗಳ ಪ್ರತಿನಿಧಿಗಳು, ವಿಶೇಷವಾಗಿ ಮುಸ್ಲಿಂ ಸಮಾಜದ ಹಲವು ನಿಯೋಗಗಳು ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿ, 2014 ರ ಪ್ರಣಾಳಿಕೆ ತೀರಾ ಅಪೂರ್ಣವಾಗಿತ್ತು, ಅದರ ಕುಂದು ಕೊರತೆಗಳನ್ನು ನಿವಾರಿಸಿ, 2019ರ ಹೊಸ ಪ್ರಣಾಳಿಕೆಯಲ್ಲಿ ತಮ್ಮ ಪ್ರಮುಖ ಬೇಡಿಕೆಗಳನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸಿ ಅವುಗಳನ್ನು ಈಡೇರಿಸುವ ಆಶ್ವಾಸನೆಯನ್ನು ಮಾತ್ರವಲ್ಲ, ಈಡೇರಿಕೆಯ ವೇಳಾಪಟ್ಟಿಯನ್ನು ಕೂಡ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕೆಂದು ಆಗ್ರಹಿಸಿದ್ದರು. ಈ ಆಗ್ರಹಗಳನ್ನೆಲ್ಲಾ ಈಡೇರಿಸಲಾಗುವುದು ಎಂಬ ಭರವಸೆಯನ್ನೂ ಅವರಿಗೆ ನೀಡಲಾಗಿತ್ತು. ತನ್ನ ಪ್ರಣಾಳಿಕೆ ರಚಿಸುವ 19 ಸದಸ್ಯರ ಸಮಿತಿಯಲ್ಲೂ ಅಲ್ಪಸಂಖ್ಯಾತರಿಗೆ ಯಾವುದೇ ಗಣ್ಯ ಪ್ರಾತಿನಿಧ್ಯ ನೀಡದ ಪಕ್ಷ ಆ ತನ್ನ ಭರವಸೆಗಳನ್ನು ಈಡೇರಿಸುವುದೆಂದು ನಂಬಿ ಕೂತದ್ದು, ಹಾಗೆ ನಂಬಿ ಕೂತವರ ಮೂರ್ಖತನವಾಗಿತ್ತು.

ಪ್ರಣಾಳಿಕೆ ತೆರೆದು ನೋಡಿದಾಗ ಹಾಗೆ ನಂಬಿಕೂತವರಿಗೆ ತೀವ್ರ ಆಘಾತ ಆಗಿರಬಹುದು. ಆದರೆ ಕಾಂಗ್ರೆಸ್‌ನ ದ್ವಂದ್ವ ನೀತಿಗಳ ಮತ್ತು ಅದು ತನ್ನ ಇಚ್ಛಾನುಸಾರ ಧರಿಸುತ್ತಾ ಬದಲಿಸುತ್ತಾ ಇರುವ ಮುಖವಾಡಗಳ ಪರಿಚಯ ಇರುವವರಿಗೆ ಒಂದಷ್ಟು ದುಃಖ ಆಗಿರಬಹುದೇ ಹೊರತು ಅಚ್ಚರಿ, ಆಘಾತ ಇತ್ಯಾದಿಯೇನೂ ಆಗಿರಲಾರದು. ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಿಜವಾಗಿ ದೇಶದ ಮತೀಯ ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಕಡೆಗಣಿಸಲಾಗಿದೆ. ಅದರಲ್ಲಿ 54 ಶೀರ್ಷಿಕೆಗಳಡಿಯಲ್ಲಿ ಕಾರ್ಮಿಕರು, ರೈತರು, ಯುವಜನರು, ಮಹಿಳೆಯರು, ಉದ್ಯಮಿಗಳು ಹೀಗೆ ಸಮಾಜದ ವಿವಿಧ ವರ್ಗಗಳನ್ನು ಹೆಸರಿಸಿ ಅವರಿಗೆ ಪ್ರತ್ಯೇಕ ಆಶ್ವಾಸನೆಗಳನ್ನು ನೀಡಲಾಗಿದೆ. ಆದರೆ ಮತೀಯ ಅಲ್ಪಸಂಖ್ಯಾತರಿಗಾಗಿ ಆ ರೀತಿ ಒಂದು ಪ್ರತ್ಯೇಕ ಶೀರ್ಷಿಕೆ ಕೂಡಾ ಇಲ್ಲ. ಭಾಷಾ ಅಲ್ಪಸಂಖ್ಯಾತರು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಒಂದೇ ಶೀರ್ಷಿಕೆಯಲ್ಲಿ ಪ್ರಸ್ತಾಪಿಸಿ ಅವರಿಗೆ ಒಟ್ಟು 11 ಆಶ್ವಾಸನೆಗಳನ್ನು ನೀಡಲಾಗಿದೆ. ಆ ಪೈಕಿ 6 ಆಶ್ವಾಸನೆಗಳು ಕೇವಲ ಭಾಷಾ ಅಲ್ಪಸಂಖ್ಯಾತರಿಗೆ ಮಾತ್ರ ಸಂಬಂಧಿಸಿವೆ. ಉಳಿದ ಐದು ಆಶ್ವಾಸನೆಗಳಲ್ಲೂ ದ್ವೇಷಾಧಾರಿತ ಹಿಂಸೆಯ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ಬಿಟ್ಟರೆ ಗಂಭೀರವಾದ ಯಾವ ಅಂಶವೂ ಇಲ್ಲ. 2014 ರ ಪ್ರಣಾಳಿಕೆಯಲ್ಲಿ ಸಾಚಾರ್ ಸಮಿತಿಯ ಶಿಫಾರಸುಗಳನ್ನು ಸಂಪೂರ್ಣ ಅನುಷ್ಠಾನಿಸುವ ಭರವಸೆ ನೀಡಲಾಗಿತ್ತು.

ಮಾತ್ರವಲ್ಲ ಪಕ್ಷದ ನಾಯಕರು, ತಮ್ಮ ಹೊಸ ಪ್ರಣಾಳಿಕೆಯಲ್ಲಿ ಅಮಿತಾಭ್ ಕುಂದು ಸಮಿತಿ, ರಂಗನಾಥ್ ಮಿಶ್ರಾ ಸಮಿತಿ ಮತ್ತು ಸುದರ್ಶನ್ ಸಮಿತಿಯ ಹಲವು ಶಿಫಾರಸುಗಳನ್ನು ಅನುಷ್ಠಾನಿಸುವ ಭರವಸೆ ನೀಡಲಾಗುವುದು ಮತ್ತು ಆ ಕುರಿತು ವೇಳಾ ಪಟ್ಟಿಯನ್ನೂ ಪ್ರಕಟಿಸಲಾಗುವುದು ಎಂದು ಅಲ್ಪಸಂಖ್ಯಾತರ ನಾಯಕರಿಗೆ ಮಾತು ಕೊಟ್ಟಿದ್ದರು. ಆದರೆ ಹೊಸ ಪ್ರಣಾಳಿಕೆಯಲ್ಲಿ ಇತರ ಸಮಿತಿಗಳ ಹೆಸರನ್ನೂ ಪ್ರಸ್ತಾಪಿಸಲಾಗಿಲ್ಲ. ಸಾಲದ್ದಕ್ಕೆ ಸಾಚಾರ್ ಸಮಿತಿಯ ಹೆಸರನ್ನೂ ಮುಲಾಜಿಲ್ಲದೆ ಕೈಬಿಡಲಾಗಿದೆ. ಸಾಚಾರ್ ಸಮಿತಿಯ ವರದಿ ಪ್ರಕಟವಾದ ಬಳಿಕ ಎಂಟು ವರ್ಷಗಳ ಕಾಲ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿದ್ದರೂ ಅದು ಆ ಸಮಿತಿಯ ಶಿಫಾರಸುಗಳನ್ನೆಲ್ಲ ಶೀತಲ ಪೆಟ್ಟಿಗೆಯಲ್ಲಿ ಇಟ್ಟು ಬಿಟ್ಟಿತ್ತು. ಆ ಮೂಲಕ ಅದು ಅಲ್ಪಸಂಖ್ಯಾತರಿಗಾಗಿ ತನ್ನ ಬಳಿ ಒಂದಷ್ಟು ಮೊಸಳೆ ಕಣ್ಣೀರು ಮಾತ್ರ ಇದೆಯೇ ಹೊರತು ಬೇರೇನೂ ಇಲ್ಲ ಎಂಬುದನ್ನು ಸಾಬೀತು ಪಡಿಸಿತ್ತು. ಈ ಬಾರಿ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರ ಅಭ್ಯುದಯದ ಕಾಳಜಿ ಕೂಡಾ ತನಗಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದೆ. ಈ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರನ್ನು ತನ್ನ ಶಕ್ತಿಯಾಗಿ ಕಾಣುವ ಬದಲು ಅವರನ್ನು ಒಂದು ಹೊರೆಯಾಗಿ ಕಾಣುತ್ತಿದೆ ಎಂಬುದಕ್ಕೆ ನಿಚ್ಚಳ ಪುರಾವೆಯಾಗಿದೆ. ಹಾಗೆ ನೋಡಿದರೆ ಕಾಂಗ್ರೆಸ್ ನ ಈ ಧೋರಣೆಗೆ ಪ್ರಣಾಳಿಕೆಯೊಂದೇ ಪುರಾವೆಯಲ್ಲ.

ಕರ್ನಾಟಕದಲ್ಲಿ ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ನಿಶ್ಶರ್ತ ಬೆಂಬಲ ನೀಡುತ್ತಾ ಬಂದಿದ್ದಾರೆ. ಮಾತ್ರವಲ್ಲ ಆ ಕಾರಣಕ್ಕಾಗಿ ಬಿ ಜೆ ಪಿ ಮತ್ತು ಜೆಡಿಎಸ್ ಪಕ್ಷಗಳ ಕೆಂಗಣ್ಣಿಗೂ ತುತ್ತಾಗಿದ್ದಾರೆ. ಆ ಮೂಲಕ ಸಾಕಷ್ಟು ನಾಶ ನಷ್ಟಗಳನ್ನೂ ಅನುಭವಿಸಿದ್ದಾರೆ. ಇದಕ್ಕೆಲ್ಲ ಪ್ರತಿಫಲ ಎಂಬಂತೆ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸುವ ಧೋರಣೆ ತಾಳಿದೆ. ಕನಿಷ್ಠ ನಾಲ್ಕು ಲೋಕ ಸಭಾ ಕ್ಷೇತ್ರಗಳಲ್ಲಿ ತಮ್ಮ ಸಮಾಜದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷ ಸೀಟು ಕೊಡುತ್ತದೆ ಎಂದು ನಿರೀಕ್ಷಿಸುತ್ತಿದ್ದ ಮುಸ್ಲಿಂ ಸಮಾಜಕ್ಕೆ, ಜುಜುಬಿ ಒಂದು ಸೀಟಿಗೆ ತೃಪ್ತಿ ಪಟ್ಟುಕೊಳ್ಳಿ ಎಂದು ಹೇಳುವ ಮೂಲಕ ಅವರ ಕಪಾಳಕ್ಕೆ ಹೊಡೆದಿದೆ. ಈ ಭರ್ಜರಿ ಹೊಡೆತವು ಕೊನೆಗೂ ಅಲ್ಪಸಂಖ್ಯಾತರನ್ನು ಅವರ ಹುಸಿ ಕನಸುಗಳಿಂದ, ಭ್ರಮೆಗಳಿಂದ ಮತ್ತು ಕಾಂಗ್ರೆಸ್ ಬಗ್ಗೆ ಅವರು ಇಟ್ಟುಕೊಂಡು ಬಂದಿರುವ ಅಂಧ ಶ್ರದ್ಧೆಯಿಂದ ಹೊರತರುವ ಸಾಧ್ಯತೆ ಇದೆ.

ಹಾಗೆಯೇ, ಘೋಷಿತ ಶತ್ರುವನ್ನು ಸೋಲಿಸುವ ಹೆಸರಲ್ಲಿ, ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾ ಬಂದಿರುವ ಅಲ್ಪಸಂಖ್ಯಾತರಿಗೆ ಅಘೋಷಿತ ಶತ್ರುವನ್ನು ಗುರುತಿಸಲು ಈ ಬೆಳವಣಿಗೆ ಸಹಾಯಕವಾಗಬಹುದು. ಒಂದು ಕೋಮುವಾದಿ ಅಥವಾ ಜಾತಿವಾದಿ ಪಕ್ಷದಿಂದ ರಕ್ಷಣೆ ಪಡೆಯಲು ಅಂತಹದ್ದೇ ಇನ್ನೊಂದು ಪಕ್ಷದೆಡೆಗೆ ಓಡುವುದು ಸರಿಯಾದ ರಣನೀತಿಯಲ್ಲ ಎಂಬುದನ್ನು ಅಲ್ಪಸಂಖ್ಯಾತರು ಅರಿತು ಹಾಗೆಂದು ಘೋಷಿಸಬೇಕಾಗಿದೆ. ಈ ದೇಶದ ಬಹುಸಂಖ್ಯಾತರು ಕೋಮುವಾದಿಗಳಾಗಲಿ ಜಾತಿವಾದಿಗಳಾಗಲಿ ಅಲ್ಲ. ಅವರೆಲ್ಲ ಕೋಮುವಾದ ಮತ್ತು ಜಾತಿವಾದದ ಬಲಿಪಶುಗಳು. ಈ ನಾಡಿನ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ಅಭ್ಯುದಯ ಬೇರೆ ಬೇರೆ ದಿಕ್ಕುಗಳಲ್ಲಿಲ್ಲ. ಆದ್ದರಿಂದ ಸಾರ್ವತ್ರಿಕ ನ್ಯಾಯದಲ್ಲಿ ನಂಬಿಕೆ ಇರುವ ಎಲ್ಲ ಸಮುದಾಯಗಳು ಮುಖವಾಡಧಾರಿ ಠಕ್ಕ ಪಕ್ಷಗಳನ್ನು ಒದ್ದೋಡಿಸಿ ಸಮಷ್ಟಿ ಹಿತವನ್ನು ಕಾಪಾಡಬಲ್ಲ ಪಕ್ಷ ಮತ್ತು ನಾಯಕರನ್ನು ತಾವೇ ಬೆಳೆಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News