“ಕೋಳಿಮರಿಯನ್ನು ಬದುಕಿಸಿ”: ಪ್ರಪಂಚದಾದ್ಯಂತ ಮೆಚ್ಚುಗೆ ಗಳಿಸಿತು ಬಾಲಕನ ಮುಗ್ಧತೆ

Update: 2019-04-04 10:59 GMT

ಹೊಸದಿಲ್ಲಿ, ಎ.4: ಮಿಝೋರಾಂ ರಾಜ್ಯದ ಪುಟ್ಟ ಬಾಲಕನೊಬ್ಬನ ಮುಗ್ಧತೆ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಆತನ ಗುಣ ನೆಟ್ಟಿಗರ ಹೃದಯ ಗೆದ್ದಿದೆ.

6 ವರ್ಷದ ಡೆರೆಕ್ ಸಿ ಲಾಲ್ಚನ್ಹಿಮಾ ಎಂಬ ಈ ಬಾಲಕ ಸೈರಂಗ ಪಟ್ಟಣದ ನಿವಾಸಿಯಾಗಿದ್ದು, ಸೈಕಲ್ ತುಳಿಯುತ್ತಾ ಸಾಗುತ್ತಿದ್ದಾಗ ನೆರೆಮನೆಯವರ ಕೋಳಿ ಮರಿಗೆ ಅಚಾನಕ್ಕಾಗಿ ಢಿಕ್ಕಿ ಹೊಡೆದಿದ್ದ. ಆ ಕೋಳಿ ಮರಿ ಅದಾಗಲೇ ಸತ್ತಿದೆ ಎಂದು ತಿಳಿಯದೇ ಇದ್ದ ಬಾಲಕ ಅದನ್ನು ಕೈಯಲ್ಲಿ ಹಿಡಿದುಕೊಂಡು ಮನೆಗೆ ಓಡಿ, ಕೋಳಿ ಮರಿಯನ್ನು ಆಸ್ಪತ್ರೆಗೆ ಸೇರಿಸುವಂತೆ ತಂದೆಯನ್ನು ಕೇಳಿಕೊಂಡಿದ್ದಾನೆ. 

ಕೊನೆಗೆ ಬಾಲಕ ತನ್ನ ಬಳಿಯಿದ್ದ ರೂ 10ರ ನೋಟನ್ನು ಒಂದು ಕೈಯಲ್ಲಿ ಹಾಗೂ ಕೋಳಿ ಮರಿಯನ್ನು ಇನ್ನೊಂದು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ಧಾವಿಸಿದ್ದ. ಅಲ್ಲಿ ಬಾಲಕ ಮತ್ತಾತನ ಕೈಯ್ಯಲ್ಲಿದ್ದ ಸತ್ತ ಕೋಳಿ ಮರಿಯನ್ನು ಕಂಡು ಹಾಗೂ ಬಾಲಕನ ಮುಗ್ಧತೆ ಮತ್ತು ಸಹಾಯ ಮಾಡುವ ತುಡಿತವನ್ನು ಕಂಡು ಅಲ್ಲಿನ ನರ್ಸ್ ಆತನ ಫೋಟೋ ಕ್ಲಿಕ್ಕಿಸಿದ್ದು ಅದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಬಾಲಕ ನಂತರ ಮನೆಗೆ ಅಳುತ್ತಾ ಬಂದಿದ್ದು ತಾನು ಮತ್ತೆ ಆ ಕೋಳಿ ಮರಿಗೆ ಸಹಾಯ ಮಾಡಲು ಆಸ್ಪತ್ರೆಗೆ ರೂ 100ರ ನೋಟಿನೊಂದಿಗೆ ತೆರಳುವುದಾಗಿ ಹೇಳಿದ್ದ. ಕೊನೆಗೆ ಕೋಳಿ ಮರಿ ಸತ್ತಿದೆ ಎಂದು ಆತನ ಹೆತ್ತವರು ಆತನಿಗೆ ಮನವರಿಕೆ ಮಾಡಿದರು.

ಈ ಘಟನೆ ಕುರಿತಾದ ಸೋಶಿಯಲ್ ಮೀಡಿಯಾ ಪೋಸ್ಟ್ ಗೆ 1 ಲಕ್ಷಕ್ಕೂ ಅಧಿಕ ಜನರು ಕಮೆಂಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News