‘ಮೋದೀಜಿಯ ಸೇನೆ’ ಎನ್ನುವವರು ದೇಶದ್ರೋಹಿಗಳು: ಕೇಂದ್ರ ಸಚಿವ ವಿ.ಕೆ. ಸಿಂಗ್

Update: 2019-04-04 17:58 GMT

ಹೊಸದಿಲ್ಲಿ, ಎ. 4: ಸೇನಾ ಪಡೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದುದಲ್ಲ ಹಾಗೂ ಅಂತಹ ಹೇಳಿಕೆ ನೀಡುವ ಯಾರೇ ಆಗಲಿ ಅವರು ದೇಶ ದ್ರೋಹಿಗಳು ಎಂದು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಜನರಲ್ (ನಿವೃತ್ತ) ವಿ.ಕೆ. ಸಿಂಗ್ ಹೇಳಿದ್ದಾರೆ.

‘‘ಒಂದು ವೇಳೆ ಯಾರಾದರೂ ಭಾರತದ ಸೇನೆ ಮೋದಿ ಸೇನೆ ಎಂದು ಹೇಳಿದರೆ, ಅವರು ತಪ್ಪು ಮಾಡುತ್ತಿರುವುದು ಮಾತ್ರವಲ್ಲ, ದೇಶಕ್ಕೆ ದ್ರೋಹ ಎಸಗುತ್ತಾರೆ. ಭಾರತದ ಸೇನೆ ದೇಶಕ್ಕೆ ಸೇರಿದುದು, ಅದು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ’’ ಎಂದು ಸಿಂಗ್ ಹೇಳಿದ್ದಾರೆ.

 ಗಾಝಿಯಾಬಾದ್‌ನಲ್ಲಿ ರವಿವಾರ ನಡೆದ ರ್ಯಾಲಿಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಕಾಂಗ್ರೆಸ್ ಭಯೋತ್ಪಾದಕರಿಗೆ ಬಿರಿಯಾಣಿ ನೀಡುತ್ತಿದ್ದರೆ, ಮೋದಿಜಿ ಅವರ ಸೇನೆ ಬಾಂಬ್ ಹಾಗೂ ಬುಲೆಟ್‌ಗಳಿಂದ ಪ್ರತ್ಯುತ್ತರ ನೀಡುತ್ತಿದೆ ಎಂದಿದ್ದರು.

 ಈ ಹೇಳಿಕೆಗೆ ಸಂಬಂಧಿಸಿ ಕಾಂಗ್ರೆಸ್ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಆದಿತ್ಯನಾಥ್ ಅವರಿಗೆ ನೋಟಿಸು ಜಾರಿ ಮಾಡಿತ್ತು ಹಾಗೂ ಎಪ್ರಿಲ್ 5ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು.

ರಾಜಕಾರಣಿಗಳು ತಮ್ಮ ಭಾಷಣದಲ್ಲಿ ಸೇನಾ ಪಡೆಯನ್ನು ರಾಜಕೀಯ ಕಾರ್ಯಕರ್ತರೊಂದಿಗೆ ಸೇರಿಸಬಾರದು ಎಂದು ಅವರು ಹೇಳಿದ್ದಾರೆ.

‘‘ನೀವು ಭಾರತದ ಸೇನೆಯ ಬಗ್ಗೆ ಮಾತನಾಡುವುದಾದರೆ, ಭಾರತದ ಸೇನೆಯ ಬಗ್ಗೆ ಮಾತನಾಡಿ. ಕೆಲವು ಸಂದರ್ಭ ನಾವು ರಾಜಕೀಯ ಕಾರ್ಯಕರ್ತರ ಬಗ್ಗೆ ಮಾತನಾಡುವಾಗ, ಮೋದಿ ಸೇನೆ ಅಥವಾ ಬಿಜೆಪಿ ಸೇನೆ ಎಂದು ಹೇಳುತ್ತೇವೆ. ಇದರಲ್ಲಿ ವ್ಯತ್ಯಾಸ ಇದೆ’’ ಎಂದು ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News