ಗೂಗಲ್ ಗೆ ರಾಜಕೀಯ ಜಾಹೀರಾತು: 1.21 ಕೋ. ರೂ. ವ್ಯಯಿಸಿದ ಬಿಜೆಪಿ

Update: 2019-04-04 15:03 GMT

ಹೊಸದಿಲ್ಲಿ, ಎ. 4: ಮುಂಬರುವ ಲೋಕಸಭಾ ಚುನಾವಣೆಗೆ ಗೂಗಲ್‌ನಲ್ಲಿ ಅತ್ಯಧಿಕ ರಾಜಕೀಯ ಜಾಹೀರಾತು ನೀಡಿದ ಪಕ್ಷಗಳ ಪಟ್ಟಿಯಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಅನಂತರದ ಸ್ಥಾನದಲ್ಲಿ ಆಂಧ್ರ ಪ್ರದೇಶದ ಜಗನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಇದೆ.

ಗೂಗಲ್‌ನ ಒಟ್ಟು ರಾಜಕೀಯ ಜಾಹೀರಾತಿನಲ್ಲಿ ಬಿಜೆಪಿ ಪಾಲು ಶೇ. 32. ಅದರ ಪ್ರತಿ ಪಕ್ಷವಾದ ಕಾಂಗ್ರೆಸ್‌ನ ಪಾಲು ತೀರಾ ಕಡಿಮೆ. ಅದರ ಪಾಲು ಶೇ. 0.14. ಇದರೊಂದಿಗೆ ಕಾಂಗ್ರೆಸ್ 6ನೇ ಸ್ಥಾನದಲ್ಲಿದೆ.

2019 ಫೆಬ್ರವರಿ 19ರಿಂದ ರಾಜಕೀಯ ಪಕ್ಷಗಳು ಹಾಗೂ ಅದರ ಅಂಗ ಸಂಸ್ಥೆಗಳು ಜಾಹೀರಾತಿಗಾಗಿ 3.76 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಗೂಗಲ್ ಗುರುವಾರ ಬಿಡುಗಡೆ ಮಾಡಿದ ‘ಇಂಡಿಯನ್ ಟ್ರಾನ್ಸ್‌ಪರೆನ್ಸಿ ವರದಿ’ ಹೇಳಿದೆ.

 ಜಾಹೀರಾತಿಗೆ ಒಟ್ಟು 1.21 ಕೋಟಿ ರೂಪಾಯಿ ವೆಚ್ಚ ಮಾಡುವ ಮೂಲಕ ಜಾಹೀರಾತಿಗೆ ಅತಿ ಹೆಚ್ಚು ವೆಚ್ಚ ಮಾಡಿದ ಮೊದಲ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಗೂಗಲ್‌ನಲ್ಲಿ ಜಾಹೀರಾತಿನ ಒಟ್ಟು ವೆಚ್ಚದ ಶೇ. 32 ಪಾಲು ಬಿಜೆಪಿಯದ್ದಾಗಿದೆ ಎಂದು ವರದಿ ತಿಳಿಸಿದೆ.

ಗೂಗಲ್‌ನಲ್ಲಿ ಜಾಹೀರಾತಿಗೆ ಒಟ್ಟು 54,100 ರೂಪಾಯಿ ವೆಚ್ಚ ಮಾಡುವ ಮೂಲಕ ಕಾಂಗ್ರೆಸ್ ಆರನೇ ಸ್ಥಾನ ಪಡೆದುಕೊಂಡಿದೆ.

ಬಿಜೆಪಿಯ ನಂತರದ ಸ್ಥಾನವನ್ನು ಆಂಧ್ರಪ್ರದೇಶದ ಜಗನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಪಡೆದುಕೊಂಡಿದೆ. ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಜಾಹೀರಾತಿಗಾಗಿ ಒಟ್ಟು 1.04 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ವರದಿ ಹೇಳಿದೆ.

ವೈಎಸ್‌ಆರ್ ಕಾಂಗ್ರೆಸ್‌ನ ಅಭ್ಯರ್ಥಿಯ ಬಗ್ಗೆ ಪ್ರಚಾರ ಮಾಡಲು ಇನ್ನೋರ್ವ ಜಾಹೀರಾತುದಾರ ಪಮ್ಮಿ ಸಾಯಿ ಚರಣ್ ರೆಡ್ಡಿ ಒಟ್ಟು 26,400 ರೂಪಾಯಿ ವೆಚ್ಚ ಮಾಡಿದ್ದಾರೆ.

ಜಾಹೀರಾತಿಗೆ 85.25 ಲಕ್ಷ ರೂಪಾಯಿ ವೆಚ್ಚ ಮಾಡುವ ಮೂಲಕ ಟಿಡಿಪಿ ಹಾಗೂ ಅದರ ವರಿಷ್ಠ ಚಂದ್ರಬಾಬು ನಾಯ್ಡು ಅವರ ಪರ ಪ್ರಚಾರ ಮಾಡುತ್ತಿರುವ ಪ್ರಮಾಣ್ಯ ಸ್ಟ್ರೆಟಜಿ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ವರದಿ ಹೇಳಿದೆ.

 ಚಂದ್ರಬಾಬು ನಾಯ್ಡು ಹಾಗೂ ಅವರ ಪಕ್ಷದ ಬಗ್ಗೆ ಪ್ರಚಾರ ಮಾಡುತ್ತಿರುವ ಇನ್ನೊಂದು ಸಂಸ್ಥೆ ಡಿಜಿಟಲ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಜಾಹೀರಾತಿಗಾಗಿ ಒಟ್ಟು 63.43 ಲಕ್ಷ ರೂಪಾಯಿ ವೆಚ್ಚ ಮಾಡುವ ಮೂಲಕ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News