ಮೆಟ್ರೊ ರೈಲಿಗೆ ಹಾರಿ ಪೊಲೀಸ್ ಎಎಸ್‌ಐ ಆತ್ಮಹತ್ಯೆ

Update: 2019-04-04 17:08 GMT

ಹೊಸದಿಲ್ಲಿ, ಎ. 4: ದಿಲ್ಲಿ ಪೊಲೀಸ್‌ನ 45ರ ಹರೆಯದ ಎಎಸ್‌ಐ ಗುರುವಾರ ಇಲ್ಲಿನ ಮೆಟ್ರೊ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ದಿಲ್ಲಿ ಪೊಲೀಸ್‌ನ ಸಂವಹನ ಘಟಕಕ್ಕೆ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಅಜಯ್ ಕುಮಾರ್ ಅವರನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹಿಮಾಚಲಪ್ರದೇಶದ ಕಾಂಗ್ರಾ ಜಿಲ್ಲೆಯ ನಿವಾಸಿಯಾಗಿರುವ ಕುಮಾರ್ ಫೆಬ್ರವರಿ 2ರಿಂದ ಮಾರ್ಚ್ 4ರ ವರೆಗೆ ವೈದ್ಯಕೀಯ ರಜೆಯಲ್ಲಿ ಇದ್ದರು. ಅವರು ತಮ್ಮ ರಜೆಯನ್ನು ಇನ್ನೊಂದು ತಿಂಗಳು ವಿಸ್ತರಿಸಿದ್ದರು. ಅವರು ಗುರುವಾರ ಕರ್ತವ್ಯಕ್ಕೆ ಹಾಜರಾಗಲಿದ್ದರು ಎಂದು ಅವರು ತಿಳಿಸಿದ್ದಾರೆ.

ಕುಮಾರ್ ಅವರು ಜಹಾಂಗಿರ್‌ಪುರಿ ರೈಲು ನಿಲ್ದಾಣದಲ್ಲಿ ಮೆಟ್ರೊ ರೈಲಿಗೆ ಹಾರಿದ್ದರು. ಗಂಭೀರ ಗಾಯಗೊಂಡ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು ಎಂದು ಪೊಲೀಸ್ ಉಪ ಆಯುಕ್ತ (ಮೆಟ್ರೊ) ಮುಹಮ್ಮದ್ ಅಲಿ ಹೇಳಿದ್ದಾರೆ.

ಅವರಲ್ಲಿ ಯಾವುದೇ ಸುಸೈಡ್ ನೋಟ್ ಪತ್ತೆಯಾಗಿಲ್ಲ. ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News