ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಒತ್ತಾಯಿಸಿ ಮಹಿಳಾ ಸಂಘಟನೆಗಳಿಂದ ಮತದಾರರ ಬಳಿಗೆ ಜಾಗೃತಿ ನಡಿಗೆ

Update: 2019-04-04 17:10 GMT

ಬೆಂಗಳೂರು, ಎ.4: ದಲಿತ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ, ಸಂವಿಧಾನವನ್ನು ಬಹಿರಂಗವಾಗಿಯೆ ಸುಡುವ ಮೂಲಕ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿರುವ ಕೋಮುವಾದಿ ಪಕ್ಷವನ್ನು ಆಡಳಿತಾಧಿಕಾರದಿಂದ ದೂರವಿಡುವಂತೆ ಪ್ರಗತಿಪರ ಮಹಿಳಾ ಸಂಘಟನೆಗಳು ಜನತೆಯಲ್ಲಿ ಮನವಿ ಮಾಡಿದವು.

ಗುರುವಾರ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ, ಪಯಣ, ಅನೇಕ, ಮಹಿಳಾ ಮುನ್ನಡೆ, ಸ್ತ್ರೀ ಜಾಗೃತಿ ಸಮಿತಿ, ಪಿಯುಸಿಎಲ್ ಸೇರಿದಂತೆ ಹಲವು ಮಹಿಳಾ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಒಟ್ಟು ಗೂಡಿ, ಬ್ರಾಹ್ಮಣಶಾಹಿ ಸಿದ್ಧಾಂತವನ್ನು ಹೊಂದಿರುವ ಕೋಮುವಾದಿ ಸರಕಾರವನ್ನು ಅಧಿಕಾರದಿಂದ ತೊಲಗಿಸುವುದೇ ಮಹಿಳಾ ಸಂಘಟನೆಗಳ ಮುಖ್ಯ ಗುರಿ ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಕಳೆದ ಐದು ವರ್ಷದಿಂದ ದೇಶವನ್ನಾಳಿದ ಸರಕಾರದ ಬೆಂಬಲದಿಂದಲೇ ಸಮಾಜದಲ್ಲಿ ದ್ವೇಷದ ವಾತಾವರಣ ನಿರ್ಮಾಣವಾಗಿದೆ. ಕಾನೂನುಬದ್ದವಾಗಿ ಗೋವು ಸಾಗಾಟ ಮಾಡುತ್ತಿದ್ದವರನ್ನು ಕೋಮುವಾದಿ ಸಂಘಟನೆಗಳು ಬರ್ಬರವಾಗಿ ಹತ್ಯೆ ಮಾಡಿವೆ. ಸಂವಿಧಾವನ್ನು ಬಹಿರಂಗವಾಗಿ ಸುಡಲಾಗಿದೆ. ಇಂತಹ ಕೃತ್ಯಗಳನ್ನು ಎಸಗಿದವರ ವಿರುದ್ಧ ಕೇಂದ್ರ ಸರಕಾರ ಯಾವುದೆ ಕ್ರಮ ಕೈಗೊಳ್ಳದೆ, ಪರೋಕ್ಷವಾಗಿ ಬೆಂಬಲ ಸೂಚಿಸಿದೆ ಎಂದು ಮಹಿಳಾ ಜಾಗೃತಿ ವೇದಿಕೆಯ ಗೀತಾ ಮೆನನ್ ಆತಂಕ ವ್ಯಕ್ತಪಡಿಸಿದರು.

ಸಾಮಾನ್ಯ ಜನತೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲಾಗದ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಸರಕಾರದ ವೈಫಲ್ಯಗಳ ಕುರಿತು ಪ್ರಶ್ನೆ ಮಾಡುವವರನ್ನು ದೇಶದ್ರೋಹಿಗಳು ಎಂಬ ರೀತಿಯಲ್ಲಿ ಹಣೆಪಟ್ಟಿ ಕಟ್ಟಲಾಗುತ್ತಿದೆ. ಇದೆಲ್ಲವೂ ಕೇಂದ್ರ ಸರಕಾರದ ಸೂಚನೆಯ ಮೇರೆಗೆ ನಡೆಯುತ್ತಿದೆ. ಇಂತಹ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣವಾಗಿ ನಿರ್ನಾಮವಾಗುವ ಅಪಾಯವಿದೆ. ಹೀಗಾಗಿ ಇಂತಹ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಕೂಡದು ಎಂಬ ಏಕೈಕ ಉದ್ದೇಶದಿಂದ ದೇಶಾದ್ಯಂತ ಜಾಗೃತಿ ನಡೆಗೆ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕಿ ಸೌಮ್ಯಾರೆಡ್ಡಿ, ಅಕ್ಕೈ ಪದ್ಮಸಾಲಿ, ಬರಹಗಾರ್ತಿ ಕೆ.ಷರಿಫಾ, ಮಲ್ಲಿಗೆ, ಗೌರಿ ಮತ್ತಿರರು ಭಾಗವಹಿಸಿದ್ದರು. ಈ ವೇಳೆ ಪ್ರಗತಿಪರ ಯುವತಂಡದಿಂದ ಕ್ರಾಂತಿಗೀತೆ ಹಾಡಲಾಯಿತು.

ಕಳೆದ ಐದು ವರ್ಷದಲ್ಲಿ ದೇಶದಾದ್ಯಂತ ಹಿಂಸೆ, ದೌರ್ಜನ್ಯಗಳು ವಿಪರೀತವಾಗಿ ಹೆಚ್ಚಾಗಿವೆ. ಇವೆಲ್ಲಾ ದೌರ್ಜನ್ಯಗಳು ಕೇಂದ್ರ ಸರಕಾರದ ಅಂಗ ಸಂಘಟನೆಗಳ ನೇತೃತ್ವದಲ್ಲಿಯೆ ನಡೆದಿರುವುದು ದುರಂತವಾಗಿದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಂಸೆಗೆ ಪ್ರಚೋದಿಸುವ ಸರಕಾರವನ್ನು ಯಾವ ಕಾರಣಕ್ಕೂ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವ ಅಗತ್ಯವಿದೆ.
-ಕವಿತಾ ಲಂಕೇಶ್, ಸಿನೆಮಾ ನಿರ್ದೇಶಕಿ

ಬಿಜೆಪಿ ಸರಕಾರದ ಅವಧಿಯಲ್ಲಿ ದೇಶದ ಬಹುತ್ವ ಸಂಸ್ಕೃತಿ ನಾಶವಾಗಿದೆ. ಬಿಜೆಪಿ ಅಂಗಸಂಸ್ಥೆಗಳು ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಹೋಗಬೇಕೆಂದು ಹಲ್ಲೆ, ಬೆದರಿಕೆಗಳನ್ನು ಒಡ್ಡುತ್ತಿವೆ. ಗೋವು ಸಾಗಾಟದ ಹೆಸರಿನಲ್ಲಿ ಅಮಾಯಕರನ್ನು ಹತ್ಯೆ ಮಾಡಲಾಗುತ್ತಿದೆ. ಇದನ್ನು ನೋಡಿಯೂ ಕೇಂದ್ರ ಸರಕಾರ ಇಂತಹ ಪ್ರಕರಣಗಳನ್ನು ಹತೋಟಿಗೆ ತರದೆ, ಮತ್ತಷ್ಟು ಹೆಚ್ಚಾಗುವಂತೆ ನೋಡಿಕೊಂಡಿದ್ದಾರೆ. ಹೀಗಾಗಿ ದೇಶದಲ್ಲಿ ಸೌರ್ಹಾದಯುತ ವಾತಾವರಣ ನಿರ್ಮಾಣ ಆಗಬೇಕಾದರೆ ಬಿಜೆಪಿ ಸೋಲಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಜಾಗೃತಿ ನಡಿಗೆ ಹಮ್ಮಿಕೊಳ್ಳಲಾಗಿದೆ.
-ಕೆ.ಷರೀಫಾ, ಬರಹಗಾರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News